ಔರಾದ್ : ಪಟ್ಟಣದಲ್ಲಿ ಅನಧಿಕೃತವಾಗಿ ಓಡಿಸುತ್ತಿರುವ ಶಾಲಾ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಔರಾದ್ ತಾಲೂಕಿನ ಎಕಂಬಾ ಗ್ರಾಮದ ಸೇಂಟ್ ಪೌಲ್ ಪಬ್ಲಿಕ್ ಶಾಲೆಯಲ್ಲಿ 1ನೇ ತರಗತಿಯ 6 ವರ್ಷದ ಕಾವೇರಿ ಎಂಬ ಬಾಲಕಿ ಶಾಲಾ ವಾಹನದ ಚಕ್ರದಲ್ಲಿ ಸಿಲುಕಿ ಮೃತಪಟ್ಟಿರುವ ಹಿನ್ನಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು, ನಿಯಮ ಗಾಳಿಗೆ ತೂರಿ ಶಾಲಾ ವಾಹನಗಳನ್ನು ಓಡಿಸುತ್ತಿರುವವರ ಮೇಲೆ ಕ್ರಮ ಜರುಗಿಸುವಂತೆ ಆರ್ ಟಿಒ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅನಧಿಕೃತವಾದ ಶಾಲಾ ವಾಹನಗಳನ್ನು ಆರ್ ಟಿಒ ಅಧಿಕಾರಿಗಳು ಇಂದು ವಶಕ್ಕೆ ಪಡೆದಿದ್ದಾರೆ.
ಇನ್‌ಸ್ಪೆಕ್ಟರ್ ಹುಸೇನ್ ನದಾಫ್ ನೇತೃತ್ವದಲ್ಲಿ, ಸಿಬ್ಬಂದಿಗಳೊಂದಿಗೆ ಔರಾದ್ ಹಾಗೂ ಸಂತಪೂರ್ ನಗರದ ರಸ್ತೆಯ ಮೇಲೆ ಸಂಚರಿಸುತ್ತಿರುವ ಶಾಲಾ ವಾಹನಗಳನ್ನು ನಿಲ್ಲಿಸಿ, ಪರಿಶೀಲನೆ ನಡೆಸಿ ಕ್ರಮ ಜರುಗಿಸಿದ್ದಾರೆ.
ನಂತರ ಶಾಲೆಗಳಿಗೆ ಭೇಟಿ ನೀಡಿದ ಅವರು ಇಲಾಖೆಯ ನಿಯಮ ಗಾಳಿಗೆ ತೂರಿ ಮಕ್ಕಳನ್ನು ಶಾಲೆಗೆ ಕರೆತಂದಿರುವ 6 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಇಲಾಖೆಯ ನಿಯಮ ಉಲ್ಲಂಘಿಸುವಂತಿಲ್ಲ. ತಾಲೂಕಿನಲ್ಲಿ ಅನೇಕ ಶಾಲೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ತರುವ ಜವಾಬ್ದಾರಿಯನ್ನು ಆಡಳಿತ ಮಂಡಳಿಯವರು ವಹಿಸಿಕೊಳ್ಳಬೇಕು. ನಿರ್ಲಕ್ಷ್ಯ ತೋರಿದಲ್ಲಿ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುತ್ತದೆ, ಶಾಲಾ ಆಡಳಿತ ಮಂಡಳಿ ಹಾಗೂ ಶಾಲೆಯ ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದ್ದಾರೆ.
ಔರಾದ್ ಹಾಗೂ ಸಂತಪೂರ್ ನಗರದಲ್ಲಿ ಆರ್ ಟಿಒ ಅಧಿಕಾರಿಗಳು ಶಾಲಾ ವಾಹನಗಳ ಮೇಲೆ ದಾಳಿ ಮಾಡುತ್ತಿದ್ದಂತೆ 6 ರಿಂದ 7 ಶಾಲೆಗಳ ಆಡಳಿತ ಮಂಡಳಿಯವರು ಸುಮಾರು 20 ರಿಂದ 25 ವಾಹನಗಳ ತೆರಿಗೆ ಪಾವತಿ ಮಾಡಿರುವುದು ಕಂಡು ಬಂದಿದೆ.
ಇನ್ನೂ 2 ದಿನಗಳಲ್ಲಿ ನಿಯಮದಂತೆ ಶಾಲಾ ವಾಹನಗಳು ರಸ್ತೆಯಲ್ಲಿ ಸಂಚರಿಸಬೇಕು. ಇಲ್ಲವಾದಲ್ಲಿ ಅಂತಹ ವಾಹನಗಳು ಗುರುತಿಸಿ ವಶಕ್ಕೆ ಪಡೆಯಲಾಗುವುದುಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಕ್ರಮ ಜರುಗಿಸಿ, ಆಯೋಗಕ್ಕೆ ವರದಿ ಸಲ್ಲಿಸಲು ತಿಳಿಸಿದ್ದೇನೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಅವರು ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


