ಅವಿವಾಹಿತ ಮಹಿಳೆಯರನ್ನು ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡು ಅವರ ಅನುಮತಿಯಿಲ್ಲದೆ ಖಾಸಗಿ ಫೋಟೋಗಳನ್ನು ತೆಗೆದು ಲಕ್ಷಾಂತರ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಚತ್ತೀಸ್ಘಡ ರಾಜ್ಯದ ಆರೋಪಿಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ (33) ಬಂಧಿತ ಆರೋಪಿ. ಈತನಿಂದ 3 ಮೊಬೈಲ್ ಹಾಗೂ 3.60 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಈತ ಸಾಫ್ಟ್ವೇರ್ ಕಂಪೆನಿಯೊಂದನ್ನು ತೆರೆಯಲು ತಯಾರಿ ಮಾಡಿಕೊಳ್ಳುತ್ತಿದ್ದನು. ಆರೋಪಿ ಅಭಿಷೇಕ್ಗೆ ವಿವಾಹವಾಗಿ ಪತ್ನಿ, ಮಕ್ಕಳಿದ್ದರೂ ಸಹ ಟೆಂಡರ್ ಎಂಬ ಆ್ಯಪ್ ಮುಖಾಂತರ ಅವಿವಾಹಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರನ್ನು ಪುಸಲಾಯಿಸಿ ವಿಶ್ವಾಸಗಳಿಸುತ್ತಿದ್ದನು.ಡೇಟಿಂಗ್ ಮಾಡುವ ಮತ್ತು ಅವರ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ನಂತರ ಹಣಕ್ಕಾಗಿ ಬೇಡಿಕೆ ಇಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆ.
ಕೊಡಿಗೆಹಳ್ಳಿಯಲ್ಲಿ ಅವಿವಾಹಿತ ಮಹಿಳೆಯನ್ನು ಟೆಂಡರ್ ಆಫ್ ಮೂಲಕ ಪರಿಚಯ ಮಾಡಿಕೊಂಡು ಅವರ ಮೊಬೈಲ್ ನಂಬರ್ ಪಡೆದುಕೊಂಡು ಅವರಿಗೆ ಫೋನ್ಕಾಲ್ ಮತ್ತು ಮೆಸೇಜ್ ಮಾಡಿ ಪುಸಲಾಯಿಸಿದ್ದಾನೆ.ಫೆ.1ರಂದು ಬೆಳಗ್ಗೆ ಆರೋಪಿ ಅಭಿಷೇಕ್ ಮಹಿಳೆ ಮನೆಗೆ ಹೋಗಿ ಬಲವಂತವಾಗಿ ಅವರನ್ನು ವಿವಸ್ತ್ರಗೊಳಿಸಿ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ತೆಗೆದುಕೊಂಡು ಹೋಗಿದ್ದನು. ತದನಂತರ ಈ ಮಹಿಳೆಗೆ ಕರೆ ಮಾಡಿ ಲಕ್ಷಾಂತರ ರೂ. ಹಣ ನೀಡುವಂತೆ ಕೇಳಿದ್ದಾನೆ. ಹಣ ಕೊಡದಿದ್ದರೆ ನಿಮ್ಮ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.ಆತನ ವರ್ತನೆಯಿಂದ ಎಚ್ಚೆತ್ತುಕೊಂಡ ಮಹಿಳೆ ಕೊಡಿಗೆಹಳ್ಳಿ ಫೋಲೀಸ್ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಶಾನ್ಯ ವಿಭಾಗದ ಉಪ ಫೋಲೀಸ್ ಆಯುಕ್ತ ಅನೂಪ್ ಎ.ಶೆಟ್ಟಿ ಮಾರ್ಗದರ್ಶನದಲ್ಲಿ ಯಲಹಂಕ ಉಪ ವಿಭಾಗದ ಸಹಾಯಕ ಫೋಲೀಸ್ ಆಯುಕ್ತ ಮನೋಜ್ಕುಮಾರ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಜಗದೀಶ್ ಮತ್ತು ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡ ಆರೋಪಿಯ ಮೊಬೈಲ್ಗಳ ಜಾಡು ಹಿಡಿದು ಘಟನೆ ನಡೆದ ಕೇವಲ ಮೂರು ಗಂಟೆಗಳಲ್ಲೇ ಆರೋಪಿಯನ್ನು ನಗರದ ಎಚ್ಎಸ್ಆರ್ ಲೇಔಟ್ನಲ್ಲಿ ಬಲೆಗೆ ಬೀಳಿಸಿಕೊಳ್ಳುವ ಮೂಲಕ ಅಮಾಯಕ ಮಹಿಳೆಯರ ಮಾನ ಕಾಪಾಡಿದ್ದಾರೆ. ಆರೋಪಿ ಅಭಿಷೇಕ್ನನ್ನು ತೀವ್ರ ವಿಚಾರಣೆಗೊಳಪಡಿಸಿರುವ ಫೋಲೀಸರು, ಈತನ ಪೂರ್ವಾಪರ ಇತಿಹಾಸವನ್ನು ಸಂಗ್ರಹಿಸುತ್ತಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB