ಕೊರಟಗೆರೆ: ಸಾಧನೆಯ ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಇನ್ನು ಹೆಚ್ಚಿಸುತ್ತದೆ ಅದನ್ನು ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಕರ್ತವ್ಯ ಮಹತ್ವವಾದದ್ದು ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಕೊರಟಗೆರೆ ಪೊಲೀಸ್ ಇಲಾಖೆಯ ಸಿಪಿಐ ಆರ್.ಪಿ.ಅನಿಲ್ ತಿಳಿಸಿದರು.
ಕೊರಟಗೆರೆ ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಛೇರಿಯಲ್ಲಿ ಏರ್ಪಡಿಸಿದ್ದ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಸಿಪಿಐ ಆರ್.ಪಿ.ಅನಿಲ್ ರವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ರಾಷ್ಟ್ರಪತಿ ಪ್ರಶಸ್ತಿ ಅತ್ಯುತ್ತಮವಾದುದು ಈ ಪ್ರಶಸ್ತಿ ರಾಜ್ಯದಲ್ಲಿ ಪ್ರತಿ ವರ್ಷ 37 ಮಂದಿಗೆ ಮಾತ್ರ ದೊರೆಯುತ್ತದೆ, ಇಂತಹ ಪ್ರಶಸ್ತಿಗಳಿಂದ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಾಗುತ್ತದೆ, ಕೊರಟಗೆರೆ ತಾಲೂಕಿನಲ್ಲಿ ಪೊಲೀಸ್ ಮತ್ತು ಪತ್ರಕರ್ತರ ಸಂಘ ಉತ್ತಮವಾಗಿ ಸ್ನೇಹಮಯವಾಗಿ ಕೆಲಸ ಮಾಡುತ್ತಿದೆ, ಎಷ್ಟೋ ಅಪಘಾತ ಕೊಲೆ ಪ್ರಕರಣಗಳಲ್ಲಿ ಪತ್ರಕರ್ತರು ಸಹಕಾರದಿಂದ ಪ್ರಕರಣಗಳು ಪತ್ತೆಯಾಗಲು ಸಹಕಾರಿಯಾಗಿದೆ, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರ ತವರು ಕ್ಷೇತ್ರದಲ್ಲಿ ಅವರ ಸಮ್ಮುಖದಲ್ಲಿ ಇಂತಹ ಪ್ರಶಸ್ತಿಯನ್ನು ಪಡೆಯುತ್ತಿರುವುದು ಹೆಮ್ಮೆ ಎನ್ನಿಸಿದೆ, ನನ್ನನ್ನು ಸನ್ಮಾನಿಸಿದ ತಾಲೂಕು ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘಕ್ಕೆ ಧನ್ಯವಾದಗಳನ್ನು ತಿಳಿಸಿದರು.
ತಹಶೀಲ್ದಾರ್ ಮಂಜುನಾಥ್ ಕೆ. ಮಾತನಾಡಿ, ಸಿಪಿಐ ಅನಿಲ್ ರವರ ಕಾರ್ಯದಕ್ಷತೆಯನ್ನು ನಾನು ಹಲವು ವರ್ಷಗಳ ಹಿಂದೆ ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೋಡಿದ್ದೇನೆ, ಅನೇಕ ಠಾಣಾ ವ್ಯಾಪ್ತಿಗೆ ಬರದ ಪ್ರಕರಣಗಳನ್ನು ಸಹ ಪತ್ತೆಹಚ್ಚಿ ಇತ್ಯರ್ಥಗೊಳಿಸಿದ್ದಾರೆ, ಇತ್ತೀಚೆಗೆ ದೆಹಲಿ ಮಾದರಿಯಲ್ಲಿ ಅತ್ತೆಯನ್ನು ತುಂಡರಿಸಿ ತಾಲೂಕಿನ ಮೂಲೆ ಮೂಲೆಗೆ ಎಸೆದಿದ್ದ ವೈದ್ಯ ಅಳಿಯನ ಪ್ರಕರಣವನ್ನು ಸಿಪಿಐರವರು ಅವರ ತಂಡದೊಂದಿಗೆ ಕೆಲವೇ ದಿನಗಳಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿದರು. ಆ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯಲೇ ಇಲ್ಲ, ಅಧಿಕಾರಿಗಳಿಗೆ ಯಾವುದೇ ಪ್ರಶಂಸೆ ಸಿಗಲಿ ಬಿಡಲಿ ಅವರ ಕರ್ತವ್ಯವನ್ನು ಮಾಡಿಯೇ ಮಾಡುತ್ತಾರೆ, ತಾಲೂಕಿನಲ್ಲೂ ಸಹ ನಾನು ಮತ್ತು ಅನಿಲ್ ರವರು ಭ್ರಾತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ಕೊರಟಗೆರೆ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉತ್ತಮವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು ಇಂದು ಆರ್.ಪಿ.ಅನಿಲ್ ರವರ ಗೌರವ ಸನ್ಮಾನ ಉತ್ತಮವಾದ ಕೆಲಸ ಎಂದರು.
ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ, ನಮ್ಮಗಳ ಹಲವು ವರ್ಷಗಳ ಪತ್ರಿಕಾ ಜೀವನದ ಬದುಕಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಪೊಲೀಸ್ ಇಲಾಖೆಯ ಅಧಿಕಾರಿಯನ್ನು ಗೌರವಿಸುತ್ತಿರುವುದು ಸಂತಸ ತಂದಿದೆ, ಗೃಹ ಸಚಿವರ ತವರು ಕ್ಷೇತ್ರದಲ್ಲಿ ಅವರ ಇಲಾಖೆಯ ಅಧಿಕಾರಿಗಳ ಸಾಧನೆ ಗೃಹ ಸಚಿವರಿಗೆ ಹೆಮ್ಮೆ ತಂದುಕೊಡುತ್ತದೆ, ಇತ್ತೀಚಿನ ಪರಿಸ್ಥಿತಿಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಸಾಧನೆಯ ಪ್ರಶಸ್ಥಿ ಪಡೆಯುವುದು ಸವಾಲಿನ ಸಂಗತಿಯಾಗಿದೆ, ನಮ್ಮ ತಾಲೂಕಿನ ಪೊಲೀಸ್ ಇಲಾಖೆಯ ವೃತ್ತ ಆರಕ್ಷಕ ನಿರೀಕ್ಷಕರಾದ ಅರ್.ಪಿ.ಅನಿಲ್ ರವರಿಗೆ ಗೌರವಿಸುತ್ತಿರುವುದು ಸಂಘದ ಕರ್ತವ್ಯವಾಗಿದ್ದು, ನಮ್ಮ ಸಂಘವು ಕರ್ತವ್ಯದೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಯಲ್ಲೂ ತೋಡಗಿಸಿಕೊಂಡಿದ್ದು ಕೊರಟಗೆರೆ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಿನಲ್ಲಿ ತನ್ನದೇ ಅದ ಪ್ರತಿಷ್ಠೆ ಹಾಗೂ ಕೀರ್ತಿಯನ್ನು ಹೊಂದಿದೆ ಎಂದರು.
ಕೊರಟಗೆರೆ ಪಿಎಸೈ ತೀರ್ಥೇಶ್ ಮಾತನಾಡಿ, ಅನಿಲ್ ರವರ ಕಾರ್ಯದಕ್ಷತೆ ನಮಗೆಲ್ಲಾ ಮಾರ್ಗದರ್ಶನವಾಗಿದೆ, ಸಣ್ಣಕೆಲಸವಾಗಲಿ ಅಥವಾ ದೊಡ್ಡ ಕೆಲಸವಾಗಲಿ ಅದನ್ನು ನಿಷ್ಠೆಯಿಂದ ಎಲ್ಲರ ಜೋತೆಗೂಡಿ ಮಾಡಿ ಮುಗಿಸುತ್ತಾರೆ, ಇಂತಹವರ ಜೋತೆಯಲ್ಲಿ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಸೌಭಾಗ್ಯವಾಗಿದ್ದು ಅವರಿಂದ ಕಲಿತು ಕೊಳ್ಳುವುದು ಹಾಗೂ ತಿಳಿದುಕೊಳ್ಳುವುದು ಸಾಕಷ್ಠು ಇದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದಿಂದ ಪ್ರಶಸ್ತಿ ಪುರಸ್ಕೃತ ಆರ್.ಪಿ.ಅನಿಲ್ ರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೃಹ ಸಚಿವರ ಆಪ್ತ ಸಹಾಯಕ ಅರವಿಂದ್, ಆರ್ ಐ ಬಸವರಾಜು, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕ ಎನ್.ಮೂರ್ತಿ, ತಾಲೂಕು ಸಂಘದ ಉಪಾಧ್ಯಕ್ಷ ಹೆಚ್.ಎನ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಎ.ಆರ್.ಚಿದಂಬರ, ಖಜಾಂಚಿ ಕೆ.ಬಿ.ಲೋಕೇಶ್, ನಿದೇಶಕರುಗಳಾದ ಎನ್.ಪದ್ಮನಾಭ್, ಸೊಗಡು ಶ್ರೀನಿವಾಸ್, ಜಿ.ಎಂ.ಶಿವಾನಂದ್, ಡಿ.ಎಂ.ರಾಘವೇಂದ್ರ, ಮಂಜುನಾಥ್, ಕೆ.ಎನ್.ಸತೀಶ್, ಬಿ.ಹೆಚ್.ಹರೀಶ್ ಬಾಬು, ನವೀನ್ ಕುಮಾರ್, ಕೆ.ಎಲ್.ಲಕ್ಷ್ಮೀಶ, ನರಸಿಂಹಮೂರ್ತಿ, ಲಕ್ಷ್ಮೀಕಾಂತ, ದೇವರಾಜು, ವಿಜಯ್‌ಶಂಕರ್, ಸತೀಶ್, ಮುತ್ತುರಾಜ್, ರಾಜು, ಬಾಬುನಾಯ್ಕ, ಮುಖಂಡ ವೀರಣ್ಣಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC