ಬೀದರ್: ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ, ಬೋಸ್ಕೋ ಬೆಂಗಳೂರು ಹಾಗೂ ಡಾನ್ ಬಾಸ್ಕೋ ಬೀದರ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಾರಿಯಲ್ಲಿರುವ ‘ಪೋಷಕತ್ವ ಯೋಜನೆ’ (Foster Care) ಕುರಿತು ಭಾಲ್ಕಿ ತಾಲೂಕಿನ ಮಳಚಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾಯಂದಿರಿಗೆ ವಿಶೇಷ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಗುವಿನ ಪಾಲನೆ, ಪೋಷಣೆ ಮತ್ತು ರಕ್ಷಣೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ತಾಯಂದಿರಿಗೆ ಯೋಜನೆಯ ಮಹತ್ವವನ್ನು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಡಾನ್ ಬಾಸ್ಕೋ ಪೋಷಕತ್ವ ಯೋಜನೆಯ ಸಂಯೋಜಕರಾದ ರಮೇಶ್ ಅವರು, ಪೋಷಕತ್ವ ಎಂದರೆ ಕಾನೂನು ಪ್ರಕಾರ ಅನಾಥವಾಗಿರುವ ಅಥವಾ ಲಾಲನೆ–ಪಾಲನೆಯಿಂದ ವಂಚಿತರಾದ ಮಕ್ಕಳಿಗೆ ತಾತ್ಕಾಲಿಕವಾಗಿ ಪರಿವಾರದ ಮೂಲಕ ಸಿಗುವ ಕಾಳಜಿಯಾಗಿದೆ. ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ, ಮಗುವಿನ ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ 2 ವರ್ಷಕ್ಕೆ ಮೀರದ ಅವಧಿಯವರೆಗೆ ಮಗುವಿನ ಜವಾಬ್ದಾರಿಯನ್ನು ವಹಿಸಿಕೊಡಲಾಗುತ್ತದೆ. ಮಕ್ಕಳಿಗೆ ಕೌಟುಂಬಿಕ ವಾತಾವರಣದಲ್ಲಿ ಬೆಳೆಯುವ ಹಕ್ಕನ್ನು ಕಲ್ಪಿಸಿಕೊಡುವುದು ಈ ಯೋಜನೆಯ ಆಶಯವಾಗಿದೆ.
ಇದೇ ಸಂದರ್ಭದಲ್ಲಿ ‘ದತ್ತು’ ಮತ್ತು ‘ಪೋಷಕತ್ವ’ ಯೋಜನೆಗಳ ನಡುವಿನ ವ್ಯತ್ಯಾಸಗಳ ಕುರಿತು ಅಂಗನವಾಡಿ ತಾಯಂದಿರಿಗೆ ಅರಿವು ಮೂಡಿಸಲಾಯಿತು. ಮಕ್ಕಳು ಅನಾಥವಾಗದಂತೆ ಮತ್ತು ಅವರಿಗೆ ಸುರಕ್ಷಿತ ಭವಿಷ್ಯ ಸಿಗುವಂತೆ ನೋಡಿಕೊಳ್ಳಲು ಸಮಾಜದ ಸಹಭಾಗಿತ್ವ ಅಗತ್ಯ ಎಂದು ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾನ್ ಬಾಸ್ಕೋ ಬೀದರ್ ಸಂಸ್ಥೆಯ ನಿರ್ದೇಶಕರಾದ ಫಾದರ್ ಸ್ಟೀವನ್ ಲಾರೆನ್ಸ್, ಅಂಗನವಾಡಿ ಕಾರ್ಯಕರ್ತೆ ವನಿತಾ ಹಾಗೂ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


