ತುಮಕೂರು: 4 ವರ್ಷ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 80 ವರ್ಷದ ಅಪರಾಧಿಗೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ(ಪೋಕ್ಸೋ) ನ್ಯಾಯಾಲಯವು 20 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸುವಂತೆ ತೀರ್ಪು ನೀಡಿದೆ.
ವಿಲ್ಸನ್ ಜೊನ್ ತನ್ ಅಲಿಯಾಸ್ ರಾಜಣ್ಣ ಅಲಿಯಾಸ್ ರಾಜಕುಮಾರ್ ಎಂಬ 80 ವರ್ಷದ ಅಪರಾಧಿಯು ದಿನಾಂಕ 5—01—2022ರಂದು ಬೆಳಗ್ಗೆ ಬೆತ್ತಲೂರು ಗ್ರಾಮದ ಚರ್ಚ್ ಮುಂಭಾಗದಲ್ಲಿರುವ ಹುಣಸೆತೋಪಿನ ಮರದ ಬಳಿ ಆಟವಾಡುತ್ತಿದ್ದ ಮಗುವನ್ನು ಚಾಕೊಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಅಪರಾಧಿಯ ಮಗಳ ಮನೆ ಬೆತ್ತಲೂರು ಗ್ರಾಮದಲ್ಲಿದ್ದು, ಅಲ್ಲಿಗೆ ಬಂದಿದ್ದ ವೇಳೆ ಈ ದುಷ್ಕೃತ್ಯವನ್ನು ಎಸಗಿದ್ದ.
ಈ ಪ್ರಕರಣಕ್ಕೂ ಮೊದಲು ಈತ ಪೋಕ್ಸೋ ಪ್ರಕರಣದಲ್ಲಿ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ಕೃತ್ಯ ಎಸಗಿ ಮೂರು ವರ್ಷ ಸಾಧಾರಣ ಶಿಕ್ಷೆ ಹಾಗೂ ದಂಡ ಕಟ್ಟಿದ್ದ. ಆದರೆ, ಇದಾದ ಬಳಿಕವೂ ಮತ್ತೆ ಅದೇ ಕೃತ್ಯವನ್ನು ಮುಂದುವರೆಸಿದ್ದ.
ತನಿಖಾಧಿಕಾರಿಗಳಾದ ಟಿ.ಎಸ್.ರಾಧಾ ಕೃಷ್ಣರವರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಪ್ರಕರಣವು ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ(ಪೋಕ್ಸೋ) ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಆರೋಪಿಯು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ರುಜುವಾತಾದ ಕಾರಣ ಗೌರವಾನ್ವಿತ ನ್ಯಾಯಾಲಯ ನ್ಯಾಯಾಧೀಶರಾದ ಸಂಧ್ಯಾ ಪಿ. ಅವರು ಅಪರಾಧಿಗೆ 20 ವರ್ಷಗಳ ಜೈಲುವಾಸ ಮತ್ತು 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದು, ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ 95 ಸಾವಿರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂ.ಗಳ ಪರಿಹಾರ ಸೇರಿ ಒಟ್ಟು 4 ಲಕ್ಷದ 95 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್.ವಾದ ಮಂಡಿಸಿದರು.
ವರದಿ: ಶಿವಕುಮಾರ್ ಮೇಷ್ಟ್ರುಮನೆ