ತುರುವೇಕೆರೆ: “ತುಮಕೂರು ಜಿಲ್ಲೆಯಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟದ ರಥವನ್ನು ಮುನ್ನಡೆಸಿದ ಸಾಲಿನಲ್ಲಿ ಬಂದಕುಂಟೆ ನಾಗರಾಜುರವರು ಅಗ್ರಸ್ಥಾನದಲ್ಲಿದ್ದಾರೆ,” ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರ ಕುಮಾರ್ ನುಡಿದರು.
ತುರುವೇಕೆರೆ ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ), ಆದಿ ಜಾಂಬವ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಿಧನರಾದ ಹಿರಿಯ ದಲಿತ ಹೋರಾಟಗಾರ ಮತ್ತು ಶಿಕ್ಷಕ ಬಂದಕುಂಟೆ ನಾಗರಾಜು ಅವರಿಗೆ ಆಯೋಜಿಸಲಾಗಿದ್ದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬಂದಕುಂಟೆ ನಾಗರಾಜಯ್ಯನವರು ಕೇವಲ ಹೋರಾಟಗಾರರಲ್ಲದೆ, ಒಬ್ಬ ಉತ್ತಮ ಲೇಖಕರೂ ಆಗಿದ್ದರು. ತಮ್ಮ ಬದುಕಿನ ಅನುಭವಗಳನ್ನು ‘ಬಿತ್ತನೆ ಬೀಜ’ ಎಂಬ ಕೃತಿಯ ಮೂಲಕ ದಾಖಲಿಸಿ ದಲಿತ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. 70ರ ದಶಕದಲ್ಲಿ ತಳ ಸಮುದಾಯಗಳು ದಬ್ಬಾಳಿಕೆಗೆ ಒಳಗಾಗಿದ್ದಾಗ, ಪ್ರೊ. ಬಿ. ಕೃಷ್ಣಪ್ಪನವರ ಮಾರ್ಗದರ್ಶನದಲ್ಲಿ ಹೋರಾಟದ ದೀಪವನ್ನು ಹಚ್ಚಿದವರು ಇವರು ಎಂದರು.
ಪ್ರೊ. ಬಿ. ಕೃಷ್ಣಪ್ಪನವರೊಂದಿಗೆ ಹೆಗಲು ಕೊಟ್ಟು ದೇವನೂರು ಮಹಾದೇವ, ಸಿದ್ದಲಿಂಗಯ್ಯ ಸೇರಿದಂತೆ ಅನೇಕ ದಿಗ್ಗಜರು ರಾಜ್ಯಾದ್ಯಂತ ಚಳುವಳಿ ಕಟ್ಟಿದರೆ, ತುಮಕೂರು ಜಿಲ್ಲೆಯಲ್ಲಿ ಆ ರಥವನ್ನು ಎಳೆಯುವ ಸಾರಥ್ಯವನ್ನು ನಾಗರಾಜು ವಹಿಸಿದ್ದರು,” ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ವಿ.ಟಿ.ವೆಂಕಟರಾಮು, “1970ಕ್ಕೂ ಮೊದಲು ‘ದಲಿತ’ ಎಂಬ ಪದ ಚಾಲ್ತಿಯಲ್ಲಿರಲಿಲ್ಲ. ದಸಂಸ ಹುಟ್ಟಿನೊಂದಿಗೆ ಈ ಶಬ್ದ ಪರಿಚಯವಾಯಿತು. ಬುದ್ಧ, ಬಸವಣ್ಣ, ಪೆರಿಯಾರ್, ಫುಲೆ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿದ್ದ ನಾಗರಾಜುರವರು, ಶೋಷಣೆಯ ವಿರುದ್ಧ ಧ್ವನಿ ಎತ್ತುವ ಧೈರ್ಯವನ್ನು ಯುವ ಸಮುದಾಯಕ್ಕೆ ತುಂಬಿದರು,” ಎಂದರು.
ಈ ಭಾವಪೂರ್ಣ ಕಾರ್ಯಕ್ರಮದಲ್ಲಿ ವಿವಿಧ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಮುಖಂಡರು, ಹೋರಾಟಗಾರರು ಭಾಗವಹಿಸಿ ದಿವಂಗತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಂದಕುಂಟೆ ನಾಗರಾಜು ಅವರ ಅಗಲಿಕೆಯಿಂದ ಪ್ರಗತಿಪರ ಹೋರಾಟದ ಒಂದು ಪ್ರಮುಖ ಕೊಂಡಿ ಕಳಚಿದಂತಾಗಿದೆ ಎಂದು ಗಣ್ಯರು ವಿಷಾದ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


