ತುಮಕೂರು: ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗೆ ಅನುಮತಿ ಸೇರಿದಂತೆ ಕುಣಿಗಲ್ ಸ್ಟಡ್‌ಫಾರಂನ 110 ಎಕರೆ ಪ್ರದೇಶವನ್ನು ಬೆಂಗಳೂರು ಟರ್ಫ್ ಕ್ಲಬ್‌ಗೆ ಹಸ್ತಾಂತರಿಸಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕುದುರೆ ರೇಸ್ ಅನ್ನು ಇನ್ನೆರಡು ವರ್ಷಗಳಲ್ಲಿ ಸಂಪೂರ್ಣ ಕುಣಿಗಲ್‌ಗೆ ಸ್ಥಳಾಂತರಿಸಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ್ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಆರ್ ಸಿಬಿ ಕಾಲ್ತುಳಿತ ಪ್ರಕರಣದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ನಿಷೇಧ ಹೇರಲಾಗಿತ್ತು. ನ್ಯಾ. ಕುನ್ನಾ ವರದಿ ಆಧಾರದಲ್ಲಿ ಷರತ್ತು ಪೂರೈಸಿದಲ್ಲಿ ಮಾತ್ರ ಪಂದ್ಯಾವಳಿಗೆ ಅನುಮತಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆರ್ ಸಿಬಿ, ಗೃಹ ಸಚಿವಾಲಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಚಿವ ಡಾ.ಜಿ.ಪರಮೇಶ್ವರ್ ಸಮಾಲೋಚಿಸಿ ಅನುಮತಿ ಕುರಿತಂತೆ ಸಂಪುಟದ ತೀರ್ಮಾನಕ್ಕೆ ಬಿಡಲಾಗಿತ್ತು. ಅದರಂತೆ ಕ್ಯಾಬಿನೆಟ್ ಚರ್ಚೆಗೊಳಪಟ್ಟು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದರು.
ಮಾ.6 ರಿಂದ 27ರವರೆಗೆ ಬಜೆಟ್ ಅಧಿವೇಶನ:
ಮಾ.6 ರಿಂದ 27ರವರೆಗೆ ವಿಧಾನಮಂಡಲ ಉಭಯ ಸದನಗಳ ಬಜೆಟ್ ಅಧಿವೇಶನ ನಡೆಸಲು ತೀರ್ಮಾನಿಸಿದ್ದು, ಮಾ.6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವರು ಎಂದು ಎಚ್. ಕೆ. ಪಾಟೀಲ್ ತಿಳಿಸಿದರು.
ಬೆಂಗಳೂರು ರೇಸ್ ಕೋರ್ಸ್ ರಸ್ತೆಯಲ್ಲಿರುವ ಟರ್ಫ್ ಕ್ಲಬ್ ಅನ್ನು ಸಂಪೂರ್ಣವಾಗಿ ಇನ್ನೆರಡು ವರ್ಷದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್‌ನ ಸ್ಟಡ್ ಫಾರಂಗೆ ಸ್ಥಳಾಂತರಿಸಲು ಸಂಪುಟ ನಿರ್ಣಯಿಸಿದ್ದು, ಪಶುಸಂಗೋಪನಾ ಇಲಾಖೆ ವಶದಲ್ಲಿದ್ದ ಕುಣಿಗಲ್ ಸ್ಟಡ್ ಫಾರಂನ 110 ಎಕರೆ 20 ಗುಂಟೆ ಜಾಗ ಸಂಪೂರ್ಣ ಟರ್ಫ್‌ಕ್ಲಬ್ ಸುಪರ್ದಿಗೆ 29 ವರ್ಷ ಗುತ್ತಿಗೆ ನೀಡಲಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


