ಶೀತ ನೆಗಡಿ, ಜ್ವರದಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ವೈದ್ಯರು ಆ್ಯಂಟಿಬಯೋಟಿಕ್ ಬರೆದು ಕೊಡುವುದನ್ನು ನಿಲ್ಲಿಸಬೇಕು. ಇದರಿಂದ ತಕ್ಷಣಕ್ಕೆ ಆರೋಗ್ಯ ಸಮಸ್ಯೆ ಸುಧಾರಿಸಿದರೂ ದೀರ್ಘಾವಧಿಯಲ್ಲಿ ಆಗುವ ಪರಿಣಾಮ ಸಂಕಷ್ಟ ತಂದೊಡ್ಡುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದ್ದು, ಆ್ಯಂಟಿಬಯೋಟಿಕ್ ಬಳಕೆಯಲ್ಲಿ ತೋರಬೇಕಾದ ವಿವೇಚನೆ ಕುರಿತು ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ.
ರಾಸಾಯನಿಕ ಮಿಶ್ರಿತ ಆಹಾರದ ಮೂಲಕವೂ ಯಥೇಚ್ಚವಾಗಿ ಆ್ಯಂಟಿಬಯೋಟಿಕ್ಸ್ ಜನರ ದೇಹ ಸೇರುತ್ತಿದೆ. ರೋಗಾಣುಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಈ ಪ್ರತಿಜೀವಕಗಳನ್ನು ಮನಸೋ ಇಚ್ಛೆ ಬಳಸಿದರೆ ವ್ಯರ್ಥ. ತುಂಬ ಬಿಕ್ಕಟ್ಟಿನ ಸಂದರ್ಭ, ತುರ್ತು ಇದ್ದಾಗ ಮಾತ್ರವೇ ಅದರ ಹಿತಮಿತ ಬಳಕೆ ಮಾಡುವುದು ಸೂಕ್ತ. ಅದಕ್ಕಾಗಿಯೇ ಐಸಿಎಂಆರ್ ಅದರ ಬಳಕೆಯ ನಿರ್ದಿಷ್ಟ ಸ್ವರೂಪ ಹೇಗಿರಬೇಕು ಎನ್ನುವುದನ್ನು ಹೇಳಿದೆ. ಚರ್ಮ ಹಾಗೂ ಸಾಫ್ಟ್ ಟಿಶ್ಶೂ ಸಮಸ್ಯೆ ಇದ್ದಾಗ ಐದು ದಿನದ ಆ್ಯಂಟಿಬಯೋಟಿಕ್ ಕೋರ್ಸ್ ಸಾಕಾಗುತ್ತದೆ. ಒಂದು ವೇಳೆ ರೋಗ ನಿರೋಧಕ ಶಕ್ತಿ ಹೀರುವ ನ್ಯೂಮೋನಿಯಾ ಅಥವಾ ಆಸ್ಪತ್ರೆಯಲ್ಲಿ ಅಂಟುವ ನ್ಯೂಮೋನಿಯಾ ಇದ್ದಾಗ ಎಂಟು ದಿನದ ಕೋರ್ಸ್ ಮುಂದುವರಿಸಬಹುದು ಎಂದು ಸಲಹೆ ನೀಡಿದೆ.
ಕಡಿಮೆ ಪ್ರಮಾಣದ ಜ್ವರ ಮತ್ತು ಸೋಂಕು ಸ್ವರೂಪದ ಶ್ವಾಸಕೋಶ ಉರಿಯೂತ ಇದ್ದಾಗ ಅವಸರವಾಗಿ ಆ್ಯಂಟಿಬಯೋಟಿಕ್ ಕೊಡಲೇಬಾರದು. ರೋಗ ಪತ್ತೆ ಪರೀಕ್ಷೆಗಳು ಸರಿಯಾದ ಔಷಧ ಬಳಕೆಗೆ ನೆರವಾಗುತ್ತವೆ. ಪ್ರಯೋಗಾಲಯದ ಮಾದರಿ ಪಡೆಯದೇ ಕಣ್ಣುಮುಚ್ಚಿ ಆ್ಯಂಟಿಬಯೋಟಿಕ್ಸ್ ಬರೆಯುವುದು ತಪ್ಪು ಎಂದು ವೈದ್ಯಕೀಯ ಮಂಡಳಿ ಹೇಳಿದೆ.
ಗಂಭೀರ ಸೋಂಕು ಪೀಡಿತರ ಮೇಲೂ ಪ್ರತಿಜೀವಕಗಳ ದುರ್ಬಳಕೆ ಸಲ್ಲದು. ಪ್ರಾಯೋಗಿಕ ಚಿಕಿತ್ಸೆ ಮಟ್ಟಕ್ಕೆ ಅದನ್ನು ಬಳಸಬಹುದು. ಗಂಭೀರವಾದ ನೆತ್ತರು ನಂಜು, ರೋಗನಿರೋಧಕ ನಾಶಕ ಮಾಡುವ ನ್ಯೂಮೋನಿಯಾ, ವೆಂಟಿಲೇಟರ್ ಸಂಬಂಧಿತ ನ್ಯೂಮೋನಿಯಾ ಮತ್ತು ಮಾಂಸಖಂಡಗಳ ತೀವ್ರ ಉರಿಯೂತದಂತಹ ಸಮಸ್ಯೆಗಳು ಕಾಣಿಸಿದಾಗ ಮಾತ್ರ ದೀರ್ಘಾವಧಿಯ ಪ್ರಾಯೋಗಿಕ ಪ್ರತಿಜೀವಕ ಚಿಕಿತ್ಸೆ ನೀಡಬಹುದು ಎಂದು ಐಸಿಎಂಆರ್ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


