ಇಂದೋರ್: ಮಧ್ಯಪ್ರದೇಶ(Madhya Pradesh)ದ ಇಂದೋರ್ ಜಿಲ್ಲೆಯಲ್ಲಿ 75 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆಕೆಯ ಮೊಮ್ಮಗ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. 500 ಗ್ರಾಂ ತೂಕದ ಬೆಳ್ಳಿಯ ಉಂಗುರಗಳಿಗಾಗಿ ಆರೋಪಿಗಳು ವೃದ್ಧೆಯನ್ನು ಕೊಂದು ಆಕೆಯ ಎರಡೂ ಕಾಲುಗಳನ್ನು ಕತ್ತರಿಸಿ ಆಭರಣಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ಳಿ ಉಂಗುರ ನೀಡಲು ಅಜ್ಜಿಯ ನಕಾರ
ಇಂದೋರ್(Indore)ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಚೋಟಿ ಖುದೈಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ರಾಜೇಶ್ ಬಗ್ರಿ ಸಂಬಂಧಿಕರ ಮಗನ ಮದುವೆಗೆ ಆರ್ಥಿಕ ಸಹಾಯಕ್ಕಾಗಿ ತನ್ನ ಅಜ್ಜಿ ಜಮುನಾ ಅವರಿಂದ ಬೆಳ್ಳಿ ಉಂಗುರಗಳನ್ನು ಕೇಳಿದ್ದಾನೆ. ಆದರೆ ಅಜ್ಜಿ ತನ್ನ ಕಾಲುಗಳಲ್ಲಿ ಧರಿಸಿದ್ದ ಎರಡು ಉಂಗುರಗಳನ್ನು ಕೊಡಲು ನಿರಾಕಿಸಿದ್ದಳೆಂದು ಎಸ್‌ಪಿ (ಗ್ರಾಮೀಣ) ಭಗವತ್ ಸಿಂಗ್ ವಿರ್ಡೆ ತಿಳಿಸಿದ್ದಾರೆ.ಸ್ನೇಹಿತನೊಂದಿಗೆ ಸೇರಿ ಅಜ್ಜಿ ಕೊಂದ ಮೊಮ್ಮಗ
ಅಜ್ಜಿ(Grandmother)ತನ್ನ ಬಳಿಯಿದ್ದ ಉಂಗುರಗಳನ್ನು ಕೊಡಲು ನಿರಾಕರಿಸಿದ್ದರಿಂದ ಮೊಮ್ಮಗ ತನ್ನ 19 ವರ್ಷದ ಸ್ನೇಹಿತ ವಿಜಯ್ ಧೋಲಿಯೊಂದಿಗೆ ಸೇರಿ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಫೆಬ್ರವರಿ 11ರಂದು ವೃದ್ಧೆಯ ಆಹಾರದಲ್ಲಿ ವಿಷಕಾರಿ ಪದಾರ್ಥವನ್ನು ಬೆರೆಸಲಾಗಿತ್ತು. ಊಟದ ನಂತರ ಅಜ್ಜಿ ಪ್ರಜ್ಞಾಹೀನಳಾದ ತಕ್ಷಣ ಆರೋಪಿಗಳು ಆಕೆಯ ಕತ್ತು ಹಿಸುಕಿ ಕೊಂದು ಎರಡೂ ಕಾಲುಗಳನ್ನು ಕೊಡಲಿಯಿಂದ ಕತ್ತರಿಸಿ ಬೆಳ್ಳಿಯ ಉಂಗುರಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತುಂಡರಿಸಿದ ಕಾಲುಗಳ ಸಮೇತ ವೃದ್ಧೆಯ ಶವವನ್ನು ಆರೋಪಿಗಳು ಆಕೆಯ ಮನೆಯ ಸಮೀಪವಿರುವ ದನದ ಸಗಣಿ ಗ್ಯಾಸ್ ಪ್ಲಾಂಟ್‌ನಲ್ಲಿ ಬಚ್ಚಿಟ್ಟಿದ್ದರಂತೆ.
ಆರೋಪಿಗಳಿಬ್ಬರನ್ನೂ ಬಂಧಿಸಿದ ಖಾಕಿಪಡೆ
ವೃದ್ಧೆಯ ಮೊಮ್ಮಗ ಎರಡೂ ಬೆಳ್ಳಿಯ ಉಂಗುರಗಳನ್ನು ಪರಿಚಿತ ವ್ಯಕ್ತಿಯೊಬ್ಬನ ಬಳಿ ಅಡಮಾನವಿಟ್ಟು 6,000 ರೂ. ಪಡೆದುಕೊಂಡಿದ್ದ. ಅಜ್ಜಿಯ ಮೊಮ್ಮಗ ಮತ್ತು ಆತನ ಸ್ನೇಹಿತ ಧೋಲಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಪೊಲೀಸರು(Madhya Pradesh Police) ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy