ಬೆಂಗಳೂರಿಗೆ ಕೇವಲ 70 ಕಿ.ಮೀ ದೂರದಲ್ಲಿದ್ದರೂ ತುಮಕೂರು ಎಷ್ಟು ಅಭಿವೃದ್ಧಿ ಆಗಬೇಕಿತ್ತು,ಆ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿಲ್ಲ. ಡಾ. ನಂಜುಂಡಪ್ಪ ಅವರ ವರದಿ ಪ್ರಕಾರ ತುಮಕೂರಿನ 10 ತಾಲೂಕುಗಳಲ್ಲಿ 8 ತಾಲೂಕುಗಳು ಹಿಂದುಳಿದವು. ನಾವು ಅಧಿಕಾರಕ್ಕೆ ಬಂದಾಗ 2013 ರಲ್ಲಿ ತುಮಕೂರಿನ ಜನರ ತಲಾಆದಾಯ 43,687 ರೂ. ಇತ್ತು. ನಾವು ಅಧಿಕಾರದಿಂದ ಇಳಿಯುವಾಗ ತಲಾಆದಾಯ 1,74.884 ರೂ. ಆಗಿತ್ತು. ಈಗಿನ ತಲಾ ಆದಾಯ 1,84,000 ರೂ. ಇದೆ. ಕಳೆದ 5 ವರ್ಷಗಳಲ್ಲಿ 9,200 ರೂ. ಜಾಸ್ತಿಯಾಗಿದೆ. ಇದು ತುಮಕೂರು ಜಿಲ್ಲೆಗೆ ಬಿಜೆಪಿ ಸರ್ಕಾರದ ಕೊಡುಗೆ, ಈ ಅಂಕಿಅಂಶಗಳನ್ನು ರಾಜ್ಯ ಬಿಜೆಪಿ ಸರ್ಕಾರವೇ ನೀಡಿರುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ತುಮಕೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿರುವುದಲ್ಲ, ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿರುವುದು. ಬಿಜೆಪಿ ಪಕ್ಷ ಕಳೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್ ಪಕ್ಷ ಪಡೆದ ಒಟ್ಟು ಮತಗಳ ಪ್ರಮಾಣ ಬಿಜೆಪಿಗಿಂತ ಹೆಚ್ಚಿದೆ. ನಮಗೆ 38.15% ಮತಗಳು ಬಂದಿದ್ದರೆ, ಬಿಜೆಪಿಗೆ 36.42% ಮತ ಬಂದಿತ್ತು. ಅಂದರೆ ಜನರ ಆಶೀರ್ವಾದ ಯಾರ ಪರವಾಗಿದೆ ಎಂದು ಅರ್ಥ? ನಮ್ಮ ಪರವಾಗಿದೆ ಅಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು, ಇದನ್ನೇ ಕುಮಾರಸ್ವಾಮಿ ಅವರು ಆಗಾಗ ಕಾಂಗ್ರೆಸ್ ನವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎನ್ನುತ್ತಾರೆ, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಕಾರಣಕ್ಕೆ ಕುಮಾರಸ್ವಾಮಿಗೆ ಬೆಂಬಲ ನೀಡಿದ್ದು, ಕುಮಾರಸ್ವಾಮಿ ಏನು ಮಹಾನ್ ಪರೋಪಕಾರಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಬೆಂಬಲ ನೀಡಿದ್ದಲ್ಲ.
2006ರಲ್ಲಿ ಕುಮಾರಸ್ವಾಮಿ ಅವರು ಧರಂ ಸಿಂಗ್ ಅವರನ್ನು ಕಿತ್ತುಹಾಕಿ ಬಿಜೆಪಿ ಜೊತೆ ಹೋದರಲ್ಲ ಇದಕ್ಕೆ ಏನನ್ನಬೇಕು? ಬಿಜೆಪಿ ಜೊತೆ ಹೋಗಿದ್ದ ಕುಮಾರಸ್ವಾಮಿ ಅವರದ್ದು ಯಾವ ರೀತಿ ಜಾತ್ಯತೀತ ಪಕ್ಷ? ಸಿದ್ದರಾಮಯ್ಯ ಅವರ ಮಾತು ಕೇಳಿಕೊಂಡು ಸುರ್ಜೇವಾಲಾ ಅವರು ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಬಿಜೆಪಿ ಜೊತೆ ಹೋಗಿದ್ದ ನಿಮ್ಮನ್ನು ಏನೆಂದು ಕರೆಯಬೇಕು ನೀವೇ ಹೇಳಿ ಕುಮಾರಸ್ವಾಮಿ ಅವರೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy