ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಿಇಒ ಕಚೇರಿಯ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷ್ಯವಹಿಸಿ, ಸಾರ್ವಜನಿಕರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವಂತಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೇವಲ 40/60 ಅಡಿ ಜಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣವಾಗುತ್ತಿದೆ. ಈಗಾಗಲೇ ಈ ಶಾಲೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್, ಬಾಲಕಿಯರ ಪದವಿಪೂರ್ವ ಕಾಲೇಜ್ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗಿದ್ದು ಇದರಿಂದಾಗಿ ದಿನೇ ದಿನೇ ಶಾಲಾ ಆಟದ ಮೈದಾನ ಕೂಡ ದಿನದಿಂದ ದಿನಕ್ಕೆ ಚಿಕ್ಕದಾಗುತ್ತಿದೆ. ಈ ಸಂಬಂಧ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ ಮತ್ತು ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಬಿ ಇ ಒ ಕಟ್ಟಡದ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿತ್ತು.
ವಿದ್ಯುತ್ ಹರಿಯುತ್ತಿರುವ ತಂತಿ:
ಕಾಮಗಾರಿ ಸ್ಥಳದಲ್ಲಿ ಇದೀಗ ಮರಗಳ ಮಾರಣಹೋಮ ಮಾಡಲಾಗಿದ್ದು, ವಿದ್ಯುತ್ ತಂತಿಯನ್ನು ಕತ್ತರಿಸಿ ಹಾಗೆಯೇ ಬಿಡಲಾಗಿದೆ. ಈ ತಂತಿಯಲ್ಲಿ ವಿದ್ಯುತ್ ಹರಿಯುತ್ತಿದ್ದು, ಯಾರಾದರೂ ಈ ತಂತಿಯನ್ನು ಸ್ಪರ್ಶಿಸಿದ್ದರೆ, ಪ್ರಾಣ ಬಲಿಯಾಗುತ್ತಿತ್ತು. ಆದರೆ, ಅದಕ್ಕೂ ಮೊದಲೇ ಸ್ಥಳೀಯರು ಎಚ್ಚೆತ್ತುಕೊಂಡು, ತಂತಿಯಲ್ಲಿ ವಿದ್ಯುತ್ ಇರುವುದನ್ನು ಪತ್ತೆ ಹಚ್ಚಿದ್ದು, ಪರಿಣಾಮವಾಗಿ ಸಾರ್ವಜನಿಕರ ಹಾಗೂ ಶಾಲೆಯ ವಿದ್ಯಾರ್ಥಿಗಳ ಪ್ರಾಣ ಉಳಿದಿದೆ. ಇದು ಇಲ್ಲಿ ನಡೆಯುತ್ತಿರುವ ನಿರ್ಲಕ್ಷ್ಯತನದ ಕಾಮಗಾರಿಗೆ ಒಂದು ಜೀವಂತ ಸಾಕ್ಷಿಯಾಗಿದೆ.
ಈ ಶಾಲೆಯಲ್ಲಿ ಸುಮಾರು 500ರಿಂದ 600 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಓಡಾಡುತ್ತಿರುವ ಪ್ರದೇಶದಲ್ಲಿ ವಿದ್ಯುತ್ ಹರಿದಾಡುತ್ತಿರುವ ತಂತಿಯನ್ನು ಹಾಗೆಯೇ ಬಿಟ್ಟಿರುವುದು ಎಷ್ಟೊಂದು ಬೇಜವಾಬ್ದಾರಿತನ ಅಲ್ಲವೇ? ಈ ಸಂಬಂಧ ತಕ್ಷಣವೇ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಕಾಮಗಾರಿ ನಿಲ್ಲಿಸಲು ಮನವಿ:
ಒಂದೆಡೆ ಶಾಲಾ ಆಟದ ಮೈದಾನದಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಾ, ಮುಂದಿನ ಪೀಳಿಗೆಗೆ ಆಟದ ಮೈದಾನವೇ ಇಲ್ಲದಂತೆ ಮಾಡಲು ಹೊರಟಿರುವುದು ಮತ್ತು ಕಟ್ಟಡ ಕಾಮಗಾರಿಯ ವೇಳೆ ಬೇಜವಾಬ್ದಾರಿತನ ಮೆರೆಯುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಅಧ್ಯಕ್ಷರಾದ ಕೆ.ರಾಮಚಂದ್ರ, ಹಾಗೂ ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್, ಕಟ್ಟಡ ಕಾಮಗಾರಿಯನ್ನು ನಿಲ್ಲಿಸುವಂತೆ ಹಿರಿಯೂರು ತಹಶೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy