ಕೊರಟಗೆರೆ: ಶಿರಾದ ಗುತ್ತಿಗೆದಾರ ಮತ್ತು ತೋವಿನಕೆರೆಯ ರೈತನಿಂದ ಹನುಮೇನಹಳ್ಳಿಯ ಎಲೆಕ್ಟ್ರಿಕಲ್ ಗುತ್ತಿಗೆದಾರನ ಮೂಲಕ 3 ಲಕ್ಷಕ್ಕೆ ಬೇಡಿಕೆಯಿಟ್ಟು 50 ಸಾವಿರ ಲಂಚ ಪಡೆಯುವಾಗ ಕೊರಟಗೆರೆ ಬೆಸ್ಕಾಂ ಎಇಇ ತುಮಕೂರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಕೊರಟಗೆರೆ ಪಟ್ಟಣದ ಬೆಸ್ಕಾಂ ಇಲಾಖೆಯ ಮೇಲೆ ತುಮಕೂರು ಲೋಕಾಯುಕ್ತ ಇಲಾಖೆಯ ಎಸ್ಪಿ ವಲೀಬಾಷ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಎಇಇ ಬಿ.ಜಿ.ಅರಸರಾಜು ಮತ್ತು ಕೊರಟಗೆರೆ ತಾಲೂಕು ಹನುಮೇಹಳ್ಳಿ ಗ್ರಾಮದ ಎಲೆಕ್ಟ್ರಿಕಲ್ ಗುತ್ತಿಗೆದಾರ ಅಂಬರೀಶ ಎಂಬಾತನ ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮದ ಸತ್ಯನಾರಾಯಣಚಾರ್ ಎಂಬಾತನ ಜಮೀನಿಗೆ ವಿದ್ಯುತ್ ಸಂಪರ್ಕ ಮತ್ತು ಟ್ರಾನ್ಸ್’ಫಾರಂ ಅಳವಡಿಕೆಗೆ ಶಿರಾ ಮೂಲದ ಗುತ್ತಿಗೆದಾರ ಹರೀಶ್ ಎಂಬಾತನಿಗೆ 3 ಲಕ್ಷ ಬೇಡಿಕೆ ಇಟ್ಟು 50 ಸಾವಿರ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ವಿದ್ಯುತ್ ಸಂಪರ್ಕಕ್ಕೆ ಗುತ್ತಿಗೆದಾರ ಅಲೆದಾಟ:
ಕುರಂಕೋಟೆಯ ರೈತ ಸತ್ಯನಾರಾಯಣಚಾರ್ ಮತ್ತು ಶಿರಾ ಮೂಲದ ಗುತ್ತಿಗೆದಾರ ಹರೀಶ್ ಎಂಬಾತ ವಿದ್ಯುತ್ ಸಂಪರ್ಕಕ್ಕಾಗಿ ಕಳೆದ 2ತಿಂಗಳಿಂದ ಬೆಸ್ಕಾಂ ಕಚೇರಿಗೆ ಅಲೆದಾಟ ನಡೆಸಿದ್ದಾರೆ. ಸರಕಾರಿ ಶುಲ್ಕ ಪಾವತಿಯ ಬಳಿಕವು ವಿದ್ಯುತ್ ಸಂಪರ್ಕ ಮತ್ತು ಟ್ರಾನ್ಸ್ಪಾರಂ ಅಳವಡಿಕೆಗೆ ಅಲೆದಾಡಿಸಿದ ಪರಿಣಾಮ ಗುತ್ತಿಗೆದಾರ ಹರೀಶ್ ಮತ್ತು ರೈತ ಸತ್ಯನಾರಾಯಣಚಾರ್ ಇಬ್ಬರು ಆ.21ರ ಸೋಮವಾರ ಲೋಕಾಯುಕ್ತ ಕಚೇರಿಗೆ ದೂರು ನೀಡಿದ ಹಿನ್ನಲೆ ಆ.23ರ ಬುಧವಾರ ದಾಳಿ ನಡೆಸಿದ್ದಾರೆ.
ತುಮಕೂರು ಲೋಕಾಯುಕ್ತ ಇಲಾಖೆಯ ಎಸ್ಪಿ ವಲೀಭಾಷ, ಡಿವೈಎಸ್ಪಿ ಹರೀಶ್, ಮಂಜುನಾಥ, ಇನ್ಸ್ ಪೆಕ್ಟರ್ ಶಿವರುದ್ರಪ್ಪಮೇಟಿ, ಸತ್ಯನಾರಾಯಣ ಸೇರಿದಂತೆ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ. ಶಿರಾ ಗುತ್ತಿಗೆದಾರ ಹರೀಶ್ ಮತ್ತು ತೋವಿನಕೆರೆ ರೈತ ದೂರಿನ ಅನ್ವಯ ಕೊರಟಗೆರೆ ಬೆಸ್ಕಾಂ ಎಇಇ ಅರಸರಾಜು ಮೇಲೆ ತುಮಕೂರು ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಭೆಯಲ್ಲಿ ಎಇಇಗೆ ರೈತರಿಂದ ತರಾಟೆ:
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆ ಕಚೇರಿಯಲ್ಲಿ ಆ.21ರ ಸೋಮವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಎಇಇ ಅರಸರಾಜು ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಅಂತರ್ಜಲ ಅಭಿವೃದ್ದಿ ನಿರ್ವಾಹಕ ಮತ್ತು ನಿಯಂತ್ರಣ ಸಮಿತಿಯ ಸಭೆಯಲ್ಲಿ 18 ಕೊಳವೆಬಾವಿ ಯೋಜನೆಗೆ ವಿದ್ಯುತ್ ಸಂಪರ್ಕ ನೀಡಲು 5ಜನ ಸದಸ್ಯರ ಪೈಕಿ 4ಜನ ಅಧಿಕಾರಿ ಸಹಿ ಹಾಕಿದ ನಂತರವು ಬೆಸ್ಕಾಂ ಇಲಾಖೆಯ ಎಇಇ ಸಹಿ ಹಾಕದೇ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತವಾಗಿತ್ತು.
ವರದಿ : ಮಂಜುಸ್ವಾಮಿ ಎಂ.ಎನ್.ಕೊರಟಗೆರೆ


