ಎಚ್.ಡಿ.ಕೋಟೆ: ಬಲಿಷ್ಠ ಭಾರತದ ಸಂವಿಧಾನವನ್ನು ಇನ್ನೂ ನೂರಾರು ವರ್ಷ ಕಳೆದರು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ವತಿಯಿಂದ ನಡೆದ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ಕರಾರು ಒಕ್ಕಾಗಿ ಬರೆದು ಭಾರತಕ್ಕೆ ಒಪ್ಪಿಸದಂತಹ ಕಾಲದಲ್ಲಿ ಅದನ್ನು ಯಥಾವತ್ತಾಗಿ ಜಾರಿಗೆ ತಂದವರು ಬಾಬು ಜಗಜೀವನ್ ರಾಮ್. ಭಾರತದ ಶ್ರೇಷ್ಠವಾದ ಗ್ರಂಥ ಅದು ಸಂವಿಧಾನ, ಕೇವಲ ಒಂದು ವರ್ಗ, ಒಂದು ಸಮುದಾಯಕ್ಕೆ ಸಂಬಂಧಿಸಿದಲ್ಲ ಭಾರತ ದೇಶದ ಪ್ರತಿ ಪ್ರಜೆಗೂ ಸಂಬಂಧಿ ಸಿದ್ದು ಎಂದರು. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರು ಈ ದೇಶದ ದಲಿತ ಸಮುದಾಯದ ಎರಡು ಕಣ್ಣುಗಳು ಎಂದರು.
ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರ ಕನಸುಗಳನ್ನು ನನಸು ಮಾಡುವ ಕೆಲಸವನ್ನು ತಳಸಮುದಾಯದ ಜನರು ಮಾಡಬೇಕು. ಭಾರತದಲ್ಲಿ ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ಮಾತ್ರ ತುಳಿತಕ್ಕೆ ಒಳಗಾಗಿಲ್ಲ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಸೇರಿದಂತೆ ಎಲ್ಲಾ ಸಮುದಾಯದ ಜನರು ಕೂಡ ತುಳಿತಕ್ಕೆ ಒಳಗಾಗಿದ್ದಾರೆ ಹಾಗಾಗಿ ಎಲ್ಲಾ ಸಮುದಾಯಕ್ಕೂ ಆರ್ಥಿಕ, ಸಾಮಾಜಿಕ ಸಮಾನತೆ ಸಿಗುವ ವರೆಗೂ ಮೀಸಲಾತಿ ಜಾರಿಯಲ್ಲಿ ಇರಬೇಕು ಎಂದು ತಿಳಿಸಿದರು.
ಬಾಬು ಜಗಜೀವನ್ ರಾಮ್ ಅವರಿಗೆ ಈ ದೇಶದ ಪ್ರಧಾನಿ ಆಗುವ ಎಲ್ಲಾ ಅರ್ಹತೆ ಇದ್ದರು ಕೂಡ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹೋರಾಟ ಮಾಡುವ ನಮ್ಮ ಸಮುದಾಯದ ನಾಯಕರು ಸನ್ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.
ಮಾಜಿ ಸಂಸದ ಆರ್.ದೃವ ನಾರಾಯಣ್ ಮಾತನಾಡಿ, ಪ್ರತಿಭೆ ಎಂಬುದು ಯಾರೊಬ್ಬರ ಸ್ವತ್ತಲ್ಲಾ ಹಾಗಾಗಿ ನಿಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕೋಡಿಹಳ್ಳಿ ಆದಿಜಾಂಬವ ಮಹಾ ಸಂಸ್ಥಾನ ಮಠದ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಹರಳಯ್ಯ ಮಠದ ಗುರು ರುದ್ರಪ್ಪಹರಳಯ್ಯ ಸ್ವಾಮೀಜಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಅರಣ್ಯ ಮತ್ತು ವಸತಿ ವಿಹಾರ ಧಾಮಗಳ ಅಧ್ಯಕ್ಷ ಎಂ.ಅಪ್ಪಣ್ಣ, ಮಾಜಿ ಶಾಸಕ ಚಿಕ್ಕಣ್ಣ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮುನಿರಾಜ್, ಡಾ ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷ ಪಿ.ನಾಗರಾಜು, ಕೊತ್ತೇಗಾಲ ತಿಮ್ಮಯ್ಯ, ನಿಂಗರಾಜು, ಪರಶಿವಮೂರ್ತಿ, ಶಿವಯ್ಯ, ಉಡ ನಾಗರಾಜು, ಎಚ್.ಹನು, ಶಾಂತಮ್ಮ, ಸಣ್ಣತಾಯಮ್ಮ, ಚಲುವರಾಜು, ಶಿವರಾಜು, ರೂಪ ಪ್ರಮೋದ್, ಬೆಟ್ಟಸ್ವಾಮಿ, ಮಹಾದೇವು, ಹಿರೇಹಳ್ಳಿ ಪ್ರಕಾಶ್, ಸೋಮು ಪಟೇಲ್ ಪೇಂಟ್ ನಾಗರಾಜ್. ಇದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


