ರಾಜಸ್ಥಾನದ ಭಿಲ್ವಾರಾದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಆತನ ಸೋದರ ತೀವ್ರ ಗಾಯಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಿಲ್ವಾರಾ ನಗರದಲ್ಲಿ 48 ಗಂಟೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ನಡೆದ ಆದರ್ಶ ತಪಾಡಿಯಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮುಸ್ಲಿಂ ಸಹೋದರರಿಬ್ಬರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಹಲವೆಡೆ ಜನರು ಗುಂಪು ಕಟ್ಟಿಕೊಂಡು ಆಕ್ರೋಶ ಹೊರಹಾಕಲಾರಂಭಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಿಲ್ವಾರಾ ನಗರದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹವಾ ಸಿಂಗ್ ಘುಮಾರಿಯಾ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಮತ್ತು ಬೆಂಬಲಿಗರು ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಅವರ ಸಹೋದರನನ್ನು ಚಿಕಿತ್ಸೆಗಾಗಿ ಉದಯಪುರಕ್ಕೆ ಕಳುಹಿಸಲಾಗಿದೆ.
ಮಹಾತ್ಮಾ ಗಾಂಧಿ ಕ್ರಾಸಿಂಗ್, ಬದ್ಲಾ ಚೌರಾಹಾ, ಭೀಮಗಂಜ್, ಸಿಟಿ ಕೊತ್ವಾಲಿ ಸೇರಿದಂತೆ ಹಲವೆಡೆ ನಗರದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ದಾಳಿಕೋರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇಬ್ರಾಹಿಂ ಪಠಾಣ್ ಅಲಿಯಾಸ್ ಭೂರಾ (34) ಹತ್ಯೆಯಾದವರು. ಆದರ್ಶ್ ತಪಾಡಿಯಾ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಈ ವ್ಯಕ್ತಿಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೇ ತಿಂಗಳಲ್ಲಿ ಗುಂಪುಗಳ ನಡುವಿನ ಜಗಳದ ವೇಳೆ ಆದರ್ಶ ತಪಾಡಿಯಾ ಅವರನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿತ್ತು. ಅದಾದ ಬಳಿಕ ಕೋಮುಗಲಭೆಗಳು ನಡೆದಿದ್ದವು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz