ಬೀದರ್: ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ 15 ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಜಮಾ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼ2025–26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಹೆಚ್ಚುವರಿಯಾಗಿ ಮಳೆಯಾಗಿ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಮಾಂಜ್ರಾ ನದಿಗೆ ಧನೆಗಾಂವ ಆಣೆಕಟ್ಟಿನಿಂದ ನೀರು ಹರಿಸಿರುವುದರಿಂದ ಪ್ರವಾಹ ಉಂಟಾಗಿ ಜಿಲ್ಲಾದ್ಯಂತ ಒಟ್ಟು 1,67,202 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆʼ ಎಂದರು.
ʼಬೆಳೆ ಹಾನಿಯಾದ ಬಗ್ಗೆ ಜಿಲ್ಲಾಡಳಿತ ಅತ್ಯಂತ ಶ್ರಮ ವಹಿಸಿ ಸಮೀಕ್ಷೆ ಕಾರ್ಯಕೈಗೊಂಡಿದ್ದು, ಪರಿಹಾರ ತಂತ್ರಾಂಶದಲ್ಲಿ ನಮೂದಿಸಿರುವ 1.68 ಲಕ್ಷ ಹೆಕ್ಟೇರ್ ಬೆಳೆ ಹಾನಿಯ ಎನ್ ಡಿಆರ್ ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಅಂದಾಜು ಪರಿಹಾರ ಮೊತ್ತು ಒಟ್ಟು ₹143.34 ಕೋಟಿಯಾಗಿದೆʼ ಎಂದು ವಿವರಿಸಿದರು.
ʼಅ.30ರೊಳಗಾಗಿ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮೆ ಆಗಲಿದೆ ಎಂದು ಕೆಲ ದಿನಗಳ ಹಿಂದೆ ನಾನು ಮಾತು ಕೊಟ್ಟಿದ್ದೆ, ಕೊಟ್ಟ ಮಾತಿನಂತೆ ಈಗಾಗಲೇ ರೈತರ ಖಾತೆಗೆ ಪರಿಹಾರ ಪಾವತಿಸುವ ಕಾರ್ಯ ಶುರುವಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಎಲ್ಲರ ರೈತರ ಖಾತೆಗೆ ನೇರವಾಗಿ ಬೆಳೆ ಹಾನಿ ಪರಿಹಾರ ಹಣ ಬರುತ್ತದೆʼ ಎಂದು ಸ್ಪಷ್ಟಪಡಿಸಿದರು

ಜಿಲ್ಲಾದ್ಯಂತ ಮಳೆ-ನೆರೆಗೆ ಹಾನಿಯಾದ ಬೆಳೆ ಹಾನಿ ವಿವರ :
ಮೊದಲ ಹಂತದಲ್ಲಿ ಎಸ್ ಡಿಆರ್ ಎಫ್ ಮಾನದಂಡ ಪ್ರಕಾರ ₹143.34 ಕೋಟಿ ಮಂಜೂರಾತಿಯಾಗಿದೆ, ಈಗಾಗಲೇ ₹17.25 ಕೋಟಿ ಬಿಡುಗಡೆಯಾಗಿದ್ದು, ಇಂದು (ಅ.31) ಸಂಜೆಯವರೆಗೆ ರೈತರ ಖಾತೆಗೆ ಹಣ ಜಮೆಯಾಗುತ್ತದೆʼ ಎಂದು ತಿಳಿಸಿದರು.
ʼಬೆಳೆ ಹಾನಿಯಾದ ಪ್ರತಿ ಹೆಕ್ಟೇರ್ ₹8,500 ಹೆಚ್ಚುವರಿ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿರುವ ಹಣವನ್ನು ಮುಂದಿನ 15 ದಿನಗಳ ಒಳಗಾಗಿ ರೈತರ ಖಾತೆಗೆ ಜಮೆ ಆಗಲಿದೆ. ಇದು ಒಟ್ಟು ₹130 ಕೋಟಿ ಹಣ ಆಗಲಿದೆ. ಎಲ್ಲಾ ಸೇರಿ ಒಟ್ಟು ₹300 ಕೋಟಿ ಹಣ ಜಿಲ್ಲೆಯ ರೈತರ ಖಾತೆಗೆ ಇಂದಿನಿಂದ ಮುಂದಿನ 15 ದಿನಗಳ ಒಳಗಾಗಿ ಸಿಗಲಿದೆʼ ಎಂದರು.
ʼಜಿಲ್ಲೆಯಲ್ಲಿ ಒಟ್ಟು 4.32 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿತ್ತು, ಅದರಲ್ಲಿ 1.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ರೈತರಿಗೆ ಬೆಳೆ ಹಾನಿ ಪರಿಹಾರ ವಿತರಣೆ ಮಾಡುವಲ್ಲಿ ರಾಜ್ಯದಲ್ಲಿಯೇ ಬೀದರ್ ಜಿಲ್ಲೆಯಲ್ಲಿ ಪ್ರಥಮವಾಗಿದೆ. ಜಿಲ್ಲೆಯಲ್ಲಿ ಮಳೆ ಮತ್ತು ನೆರೆಯಿಂದ ಒಟ್ಟು ₹672.16 ಕೋಟಿ ಮೌಲ್ಯದ ಆಸ್ತಿ–ಪಾಸ್ತಿ ಹಾನಿಯಾಗಿದೆʼ ಎಂದರು.
ಬೆಳೆ ವಿಮೆ :ಬೀದರ್ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಸುಮಾರು 2,04,019 ಪ್ರಸ್ತಾವನೆಗಳನ್ನು PMFBY ಯೋಜನೆಯಡಿಯಲ್ಲಿ ನೋಂದಾಯಿಸಲಾಗಿದೆ. ಒಟ್ಟು 1,22,061 ಹೆಕ್ಟೇರ್ ಪ್ರದೇಶ ಬೆಳೆಯು ವಿಮೆಯಡಿ ನೋಂದಾವಣಿಯಾಗಿದೆ. ಅದರಲ್ಲಿ ಸೋಯಾಅವರೆ 56,004, ತೊಗರಿ 42,139, ಉದ್ದು 9,135, ಹೆಸರು 13,624 ಹಾಗೂ ಹತ್ತಿ 647 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಮೆ ಮಾಡಿಸಲಾಗಿದೆ.
ಸ್ಥಳಿಯ ಪ್ರಕೃತಿ ವಿಕೋಪದಡಿ ಜಿಲ್ಲೆಯಲ್ಲಿ ಒಟ್ಟು 88,836 ವಿಮೆ ನೋಂದಣಿ ಮಾಡಿಸಿದ ರೈತರಿಂದ ಹೆಚ್ಚಿನ ಮಳೆಯಾಗಿದ ಕುರಿತು ಟೋಲ್ ಫ್ರೀ ಸಂಖ್ಯೆಯಿಂದ ದೂರುಗಳನ್ನು ದಾಖಲಿಸಲಾಗಿ, ಅದರಲ್ಲಿ ಸೋಯಾ ಅವರೆ ಬೆಳೆಗೆ 36,389 ದೂರು ದಾಖಲಾಗಿದ್ದು, ತೊಗರಿ ಬೆಳೆಗೆ 34,564, ಹೆಸರು ಬೆಳೆಗೆ 9,905 ಹಾಗೂ ಉದ್ದು ಬೆಳೆಗೆ 7,264 ದೂರುಗಳು ದಾಖಲಾಗಿದೆ, ಅದರ ಸಮೀಕ್ಷೆಯು ಕೊನೆಯ ಹಂತದಲ್ಲಿದೆʼ ಎಂದು ಮಾಹಿತಿ ನೀಡಿದರು
ʼಸಂರಕ್ಷಣೆ ತಂತ್ರಾಂಶದಲ್ಲಿ ಬೆಳೆ ನಷ್ಟದ ಅಂದಾಜು ಕುರಿತು ಪರಿಹಾರ ಲೆಕ್ಕಾಚಾರ ಮಾಡಲಾಗಿ ಬೆಳೆ ವಿಮೆಯಡಿ ನೋಂದಾಯಿಸಲಾದ ರೈತರಿಗೆ ಮುಂದಿನ ತಿಂಗಳಿನಲ್ಲಿ ಆಧಾರ ಸಂಖ್ಯೆಯ ಮೂಲಕ ನೇರ ಸಹಾಯ ಧನವನ್ನು ರೈತರಿಗೆ ವರ್ಗಾಯಿಸಲಾಗುವುದುʼ ಎಂದು ತಿಳಿಸಿದರು
ʼ42,139 ಹೆಕ್ಟೇರ್ ತೊಗರಿ ಬೆಳೆ ವಿಮೆ ಮಾಡಿದ ಪ್ರದೇಶಕ್ಕೆ 34,564 ರೈತರು ಹೆಚ್ಚಿನ ಮಳೆಯಿಂದಾಗಿ ಬೆಳೆ ನಷ್ಟದ ಕುರಿತು ಆನ್ ಲೈನ್ ನಲ್ಲಿ ಟೋಲ್ ಫ್ರೀ ಸಂಖ್ಯೆಯಿಂದ ದೂರುಗಳನ್ನು ದಾಖಲಿಸಿದ್ದು, ಈ ನಿಟ್ಟಿನಲ್ಲಿ ತೊಗರಿ ಬೆಳೆಗೆ ವಿಮೆ ಮಾಡಿದ ರೈತರಿಗೆ ಅನುಕೂಲವಾಗುವಂತೆ ಬೆಳೆ ನಷ್ಟದ ಬಗ್ಗೆ ಮಧ್ಯೆ ಋತುವಿನ ಪ್ರತಿಕೂಲ ಪರಿಸ್ಥಿತಿ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆʼ ಎಂದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
 
		 
					
					 


