ಬೀದರ್: ನಗರದ ಹಳೆ ನಾವದಗೇರಿಯ ಶೆಟರ್ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ 3,99,534 ರೂ. ಮೌಲ್ಯದ ಸುಮಾರು 117 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಅನೌಪಚಾರಿಕ ಪಡಿತರ ಪ್ರದೇಶದ ಆಹಾರ ನಿರೀಕ್ಷಕ ಉಪನಿರ್ದೇಶಕರು ಹಾಗೂ ಜಿಲ್ಲಾ ಆಹಾರ ನಿರೀಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ನಗರದ ಹಳೆ ನಾವದಗೇರಿ ಹತ್ತಿರ ಒಂದು ಶೆಟರ್ ಅಂಗಡಿಯಲ್ಲಿ ಸಾರ್ವಜನಿಕರಿಗೆ ಸರಬರಾಜು ಮಾಡುವ ಪಡಿತರ ಆಹಾರ ಧಾನ್ಯ ಅಕ್ರಮವಾಗಿ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಎಸ್ಪಿ ಪ್ರದೀಪ್ ಗುಂಟಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ ಅವರ ನಿರ್ದೇಶನದಂತೆ ಹಾಗೂ ಪ್ರಭಾರಿ ಪೊಲೀಸ್ ಉಪಾಧೀಕ್ಷಕ ಎಮ್.ಡಿ.ಸನಾದಿ ಅವರ ಮಾರ್ಗದರ್ಶನದಂತೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಿದ್ದಣ್ಣ ಗಿರಿಗೌಡರ್ ಮತ್ತು ತಂಡ ದಾಳಿ ನಡೆಸಿತ್ತು.
ನಾವದಗೇರಿಯ ರಸ್ತೆ ಹತ್ತಿರದ ಶೆಟರ್ ಅಂಗಡಿ ಒಂದಕ್ಕೆ ಕೀಲಿ ಹಾಕಲಾಗಿತ್ತು. ಹತ್ತಿರ ಹೋಗಿ ನೋಡಲು ಯಾರು ಮಾಲಕರು ಇರಲಿಲ್ಲ. ನಂತರ ಆಹಾರ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ಕೀಲಿ ರಿಪೇರಿ ಮಾಡುವ ವ್ಯಕ್ತಿಯನ್ನು ಕರೆಸಿ ಅಂಗಡಿ ತೆರೆದು ನೋಡಲಾಗಿದೆ. ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಪಡಿತರ ಅಕ್ಕಿಯನ್ನು ಚೀಲದಲ್ಲಿ ಸಂಗ್ರಹಿಸಿ ಇಟ್ಟಿರುವುದು ಕಂಡು ಬಂದಿದೆ. ಆಹಾರ ನಿರೀಕ್ಷಕರು ಎಲ್ಲಾ ಚೀಲಗಳಲ್ಲಿ ಇರುವ ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿದ್ದು, ಚೀಲದಲ್ಲಿರುವ ಅಕ್ಕಿಯು ಸರ್ಕಾರದಿಂದ ಸಾರ್ವಜನಿಕರಿಗೆ ಸರಬರಾಜು ಮಾಡುವ ಪಡಿತರ ಆಹಾರ ಧಾನ್ಯ ಇರುವ ಬಗ್ಗೆ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಕಿ ಚೀಲಗಳು ಪರಿಶೀಲಿಸಿ ನೋಡಿದಾಗ ಒಟ್ಟು 243 ಚೀಲಗಳಿದ್ದವು. ಅವುಗಳ ಒಟ್ಟು ತೂಕ 117.50 ಕ್ವಿಂಟಾಲ್ ಇತ್ತು. ಆ ಪಡಿತರ ಅಕ್ಕಿಯ ಮೌಲ್ಯವು 3,99,534 ರೂ. ಬೆಲೆಯುಳ್ಳದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4