ಬೀದರ್: ಜಿಲ್ಲೆಯ ನಿವೇಶನದ ಡಿಜಿಟಲ್ ಖಾತಾ ಮಾಡಿಕೊಡಲು 12 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಔರಾದ ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯತ್ ಪಿಡಿಒ ಅನಿತಾ ರಾಠೋಡ್ ಸಿಕ್ಕಿ ಬಿದ್ದ ಅಧಿಕಾರಿ.
ಧೂಪತಮಹಾಗಾಂವ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಜೀರ್ಗಾ(ಬಿ) ಗ್ರಾಮದ ರಾಜಕುಮಾರ್ ಪಾಟೀಲ್ ಎಂಬುವವರ ನಿವೇಶನದ ಡಿಜಿಟಲ್ ಖಾತಾ ಮಾಡಿಕೊಡಲು ಪಿಡಿಒ ಅನಿತಾ ಅವರು 12 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರಾಜಕುಮಾರ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪಿಡಿಒ ಅನಿತಾ ರಾಠೋಡ್ ಹಾಗೂ ಅವರ ಪತಿ ದಯಾನಂದ ರಾಠೋಡ್ ಬುಧವಾರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿಎಸ್ಪಿ ಹಣಮಂತರಾವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


