ಬೀದರ್: ಸರ್ಕಾರದ ಮಹತ್ವಕಾಂಕ್ಷಿ 15ನೇ ಹಣಕಾಸು ಯೋಜನೆಯ ಮಾರ್ಗಸೂಚಿಗಳನ್ನು ಹಾಗೂ ಕೆಟಿಪಿಪಿ ನಿಯಮ ಉಲ್ಲಂಘನೆ ಮಾಡಿರುವ ಆರೋಪದಡಿ ಹುಲಸೂರ ಗ್ರಾಮ ಪಂಚಾಯತ್ ಪಿಡಿಒ ರಮೇಶ್ ಮಿಲಿಂದಕರ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬಂದೋಲೆ ಆದೇಶಿಸಿದ್ದಾರೆ.
2024–25 ನೇ ಸಾಲಿನ 15ನೇ ಹಣಕಾಸು ಯೋಜನೆಯನ್ನು ಸಾಮಾನ್ಯ ಸಭೆ/ಗ್ರಾಮ ಸಭೆ ಜರುಗಿಸದೆ ಗ್ರಾ.ಪಂ. ಸದಸ್ಯರಿಗೆ ಮಾಹಿತಿ ನೀಡದೆ ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿ ನಡೆಸಿ ಅದರ ಬಿಲ್ ಪಾವತಿ ಮಾಡುತ್ತಿದ್ದಾರೆ. ನಿಧಿ–1 ನಿಧಿ–2 ಖಾತೆಗಳ ಕುರಿತು ಮಾಹಿತಿ ಕೇಳಿದರೂ ಮಾಹಿತಿ ನೀಡಿಲ್ಲ. 9(ಎ)11(ಬಿ) ಬಗ್ಗೆ ಮಾಹಿತಿ ಕೇಳಿದರು ಇಲ್ಲಿಯವರೆಗೆ ನೀಡಿರುವುದಿಲ್ಲ’ ಎಂದು ಅದೇ ಗ್ರಾಮ ಪಂಚಾಯಿತಿ ಸದಸ್ಯ ದೇವೆಂದ್ರ ಬಿ. ಪವಾರ ದೂರು ಸಲ್ಲಿಸಿದ್ದರು.
ಗ್ರಾಮ ಪಂಚಾಯಿತಿ ನಿಧಿ–1 ಮತ್ತು ನಿಧಿ–2 ಖಾತೆಯಿಂದ ₹22 ಲಕ್ಷ ಮತ್ತು 15ನೇ ಹಣಕಾಸು ಯೋಜನೆಯಡಿ ₹37 ಲಕ್ಷ ಖರ್ಚು ಮಾಡಿದ್ದಾರೆ. 2024–25ನೇ ಸಾಲಿನ 15ನೇ ಹಣಕಾಸು ಯೋಜನೆ ಕಾಮಗಾರಿಗಳನ್ನು ಮತ್ತು ನಿಧಿ 1 & 2 ಖಾತೆಗಳಲ್ಲಿ ಅವ್ಯವಹಾರ ಮಾಡುತ್ತಿದ್ದಾರೆ ಎಂದು ಸೆ. ರಂದು ಹುಲಸೂರ ಗ್ರಾ.ಪಂ. ಎದುರು ಧರಣಿ ನಡೆಸಿ ಜಿ.ಪಂ. ಸಿಇಒ ಅವರಿಗೆ ಮನವಿ ಸಲ್ಲಿಸಿ ಸೂಕ್ತ ತನಿಖೆ ಕೈಗೊಳ್ಳುವಂತೆ ಅವರು ಆಗ್ರಹಿಸಿದರು
ಸದರಿ ದೂರಿನ್ವಯ ಮಿರಖಲ್ ಗ್ರಾಮ ಪಂಚಾಯತ ಗ್ರೇಡ್–1 ಕಾರ್ಯದರ್ಶಿ ಹಾಗೂ ಹುಲಸೂರ ಗ್ರಾಮ ಪಂಚಾಯತ ಪ್ರಭಾರಿ ಪಿಡಿಒ ರಮೇಶ್ ಮಿಲಿಂದಕರ್ ಅವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಸರ್ಕಾರದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಬಗ್ಗೆ ಜಂಟಿ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಜಂಟಿ ಪರಿಶೀಲನಾ ವರದಿಯನ್ನು ಪರಿಗಣಿಸಿ ಪಿಡಿಒ ರಮೇಶ ಮಿಲಿಂದಕರ್ ಅವರ ಮೇಲಿನ ಆರೋಪಗಳಿಗೆ ಹಾಗೂ ದುರ್ನಡತೆಗೆ ಸಂಬಂಧಿಸಿದಂತೆ ಕರ್ನಾಟಕ ನಾಗರಿಕ ಸೇವಾ ನಿಯಮದಡಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಪಿಡಿಒ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ. ಕೆಸಿಎಸ್ಆರ್ ನಿಯಮ 98 ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರದಿ: ಅರವಿಂದ ಮಲ್ಲಿಗೆ , ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


