ತಿಪಟೂರು:ತಾಲ್ಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಬಿದರೆಗುಡಿ ಶ್ರೀ ಬಿದಿರಾಂಬಿಕ ದೇವಾಲಯದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿ ದಲಿತ ಯುವಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿ ಪ್ರಸಿದ್ದ ಯಾತ್ರ ಕ್ಷೇತ್ರ 64 ಹಳ್ಳಿ ನಾಡದೇವತೆ ಶ್ರೀ ಬಿದಿರಾಂಬಿಕ ದೇವಿ ದೇವಾಲಯದಲ್ಲಿ ದೇವಾಲಯ ಅಸ್ಪೃಷ್ಯತೆ ಆಚರಣೆ ನಡೆದಿದ್ದು, ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಬಿದಿರೆಗುಡಿ ಶ್ರೀಚಿಕ್ಕಮ್ಮ ದೇವಿ ದೇವಾಲಯದ ಅರ್ಚಕ ಸುಮಾರು 30 ವರ್ಷ ವಯಸ್ಸಿನ ಲಿಂಗರಾಜು ಎಂಬ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ
ಹಲವಾರು ವರ್ಷಗಳಿಂದ ಶ್ರೀ ಬಿದಿರಾಂಬಿಕ ದೇವಾಲಯದಲ್ಲಿ ಅಸ್ಪೃಷ್ಯತೆ ಆಚರಣೆ ಮಾಡಲಾಗುತ್ತಿದ್ದು, ದೇವಾಲಯದಲ್ಲಿ ದಲಿತರಿಗೆ ಪೂಜೆ ನಿರಾಕರಿಸಲಾಗುತ್ತಿದೆ ಎಂದು ಎಸಿ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಅನೇಕ ದೂರುಗಳನ್ನ ಸಹ ಸ್ಥಳೀಯ ದಲಿತರು ನೀಡಿದರು ಎನ್ನಲಾಗಿದೆ, ಆದರೆ ಕಳೆದ ವರ್ಷ ಶ್ರೀಬಿದಿರಮ್ಮ ದೇವಿ ಉತ್ಸವ ಮೂರ್ತಿ ಶ್ರೀಚಿಕ್ಕಮ್ಮ ದೇವಿ ದೇವಾಲಯದ ಬಳಿ ಬಂದಾಗ ಚಿಕ್ಕಮ್ಮ ದೇವಿ ಅರ್ಚಕ ಈಡುಗಾಯಿ ಹಾಕಿದ್ದಾನೆ, ಈ ವಿಚಾರವಾಗಿ ದಲಿತರು ಈಡುಗಾಯಿಹಾಕುವಂತಿಲ್ಲ, ನೀನು ಈಡುಗಾಯಿಹಾಕಿ ಮೈಲಿಗೆ ಮಾಡಿದ್ದೀಯ ಎಂದು ಗಲಾಟೆ ಮಾಡಲಾಗಿದೆ.
ಈ ವಿಚಾರವಾಗಿ ಪೊಲೀಸ್ ಇಲಾಖೆ ಮಧ್ಯಪ್ರವೇಶದಿಂದ ಪರಿಸ್ಥಿತಿ ಸುಧಾರಿಸಿದ್ದು ಇದೇ ಜಿದ್ದಿಗೆ ಬಿದ್ದ ವ್ಯಕ್ತಿಗಳು ದೊಡ್ಡಮ್ಮದೇವಿ ಧರ್ಮದರ್ಶಿಗಳಿಗೆ ಮಾಹಿತಿ ನೀಡದೆ ,ಚಿಕ್ಕಮ್ಮ ದೇವರಪೀಠ ಮಾಡಿಸಲಾಗಿದೆ ಎಂದು ಆರೋಪಿಸಿ ಧರ್ಮದರ್ಶಿ ಶಿವಕುಮಾರ್ ಸಮ್ಮುಖದಲ್ಲೇ ಸುಮಾರು 20 ಜನರ ಗುಂಪು ಲಿಂಗರಾಜು ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ್ದಾರೆ ಎನ್ನಲಾಗಿದ್ದು ಗಾಯಳು ಲಿಂಗರಾಜು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು ಹೊನ್ನವಳ್ಳಿ ಪೋಲೀಸರು ಹಾಗೂ ತಿಪಟೂರು ಗ್ರಾಮಾಂತರ ವೃತ್ತನಿರೀಕ್ಷಕ ಸಿದ್ದರಾಮೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ರೀ ಬಿದಿರಾಂಬಿಕ ದೇವಾಲಯದಲ್ಲಿ ಅಸ್ಪೃಷ್ಯತೆ ಆಚರಣೆಯಲ್ಲಿದ್ದು, ದೇವಾಲಯದಲ್ಲಿ ಕಳೆದ ನಾಲ್ಕುದಿನಗಳಿಂದ ಜಾತ್ರೆ ನಡೆಯುತ್ತಿದೆ. ಜಾತ್ರೆ ಅಂಗವಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಹೋದ ದಲಿತರ ಮೇಲೆ ಗಲಾಟೆ ಮಾಡಿದ್ದು ಚಿಕ್ಕಮ್ಮ ದೇವರಿಗೆ ಪೀಠ ಮಾಡಿಸಿರುವ ವಿಚಾರ ಮುಂದಿಟ್ಟು ನನ್ನ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿದ್ದಾರೆ.
–ಲಿಂಗರಾಜು ಗಾಯಾಳು
ಶ್ರೀ ಬಿದಿರಾಂಬಿಕ ದೇವಾಲಯಕ್ಕೆ ದಲಿತರ ಪ್ರವೇಶವಿಲ್ಲ ದಲಿತರಿಗೆ ಪ್ರವೇಶ ನೀಡಲು ಬಿದಿರೆಗುಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ದಲಿತರು ಸರ್ಕಾರಕ್ಕೆ ಅನೇಕ ಭಾರಿ ಮನವಿ ಸಲ್ಲಿಸಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಕಾಟಾಚಾರಕ್ಕೆ ಅಸ್ಪೃಷ್ಯತೆ ಆಚರಣೆ ಕಾನೂನು ಬಾಹಿರ ಎನ್ನುವ ನಾಮಫಲಕ ಅಳವಡಿಸಲಾಗಿದೆ
–ಧನಂಜಯ ಬಿದಿರೆ ಗುಡಿ ಗ್ರಾಮಸ್ಥರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy