ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ರಾಜ್ಯದಲ್ಲಿನ ಬರದ ಬಗ್ಗೆ ಕೇಂದ್ರದ ನಾಯಕರನ್ನು ಒಂದು ದಿನವೂ ಭೇಟಿ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋಹನ್ ಸಿಂಗ್ ಸರ್ಕಾರದಲ್ಲಿ ಆದ ತಾರತಮ್ಯದ ಬಗ್ಗೆ ಬಿಜೆಪಿ ದಾಖಲೆ ಬಿಡುಗಡೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮನಮೋಹನ್ ಸಿಂಗ್ ಸರ್ಕಾರ ಹೋಗಿ 10 ವರ್ಷ ಆಗಿದೆ. ಇದನ್ನೂ ಕೇಳುವವರಿಗೆ ಜ್ಞಾನ ಇರಬೇಕು. ಬುದ್ಧಿವಂತಿಕೆ ಇರಬೇಕು. ಈಗ ಅಧಿಕಾರ ನಿಮ್ಮ ಕೈಯಲ್ಲಿದೆ. ನೀವು ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಅಂತಿದ್ರಿ. ಡಬಲ್ ಎಂಜಿನ್ ಸರ್ಕಾರ ಮಾಡಿದ್ರಿ. ಡಬಲ್ ಎಂಜಿನ್ ಸರ್ಕಾರ ರಾಜ್ಯಕ್ಕೆ ಏನು ತಂದಿತ್ತು. ಅದು ಬಹಳ ಮುಖ್ಯ ಎಂದು ಹೇಳಿದರು.
27 ಸಂಸದರನ್ನು ಇಟ್ಟುಕೊಂಡು ಬರಗಾಲದ ಮೀಟಿಂಗ್ ಮಾಡಿಸಲು ಸಾಧ್ಯವಾಗಿಲ್ಲ. ಸಭೆ ನಡೆಸಿ ಹಣ ಬಿಡುಗಡೆ ಮಾಡಿಸಿಲ್ಲ. ರಾಜ್ಯ ಸರ್ಕಾರ ಏನು ಕೊಟ್ಟಿಲ್ಲ ಅಂತಾರೆ, ಮೊದಲ ಬಾರಿಗೆ ನಮ್ಮ ರಾಜ್ಯ ಸರ್ಕಾರ ರೈತರ ಖಾತೆಗೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ 2,000 ಹಣ ಜಮೆ ಮಾಡಿದ್ದೇವೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾವು ದೆಹಲಿಗೆ ಹೊರಟಿದ್ದೇವೆಂದು ಇದೀಗ ಕೇರಳದವರು ಹೊರಟಿದ್ದಾರೆ ಎಂದರು.
ಕರ್ನಾಟಕಕ್ಕೆ ಅನ್ಯಾಯ ಆಗಿದೆ, ಅದರಲ್ಲಿ ಅನುಮಾನವೇ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯ ತಾರತಮ್ಯ ಹೊರ ತೆಗೆಯುತ್ತೇವೆ ಅಂದರೆ, ಬಿಜೆಪಿಯವರು ಅನ್ಯಾಯ ಮಾಡಿದೆ ಅಂತ ಒಪ್ಪಿಕೊಂಡ ಹಾಗೆ ಆಯಿತಲ್ಲ. ಈಗ ಸರಿ ಮಾಡಬೇಕಿತ್ತಲ್ಲ’ ಎಂದು ಪ್ರಶ್ನಿಸಿದರು.


