ತಡರಾತ್ರಿ ಊಟ ನೀಡಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರ ಸೇರಿದಂತೆ ಯುವಕರ ಗುಂಪೊಂದು ಮಹಿಳೆಯರು ಸೇರಿದಂತೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನ.20ರಂದು ರಾತ್ರಿ 11.30ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ನಗರದ ಬಳಿಯ ವಿಲೇಜ್ ರೆಸ್ಟೋರೆಂಟ್ನಲ್ಲಿ ಯುವಕರ ಗುಂಪು ಗೂಂಡಾಗಿರಿ ನಡೆಸಿ, ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆ ಮಾಡಲಾಗಿದೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.
ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂದಿಯ ಕಾಲರ್ ಹಿಡಿದು ಎಳೆದಾಡಿ ಊಟ ಕೊಟ್ಟರೆ ಸರಿ, ಇಲ್ದಿದ್ರೆ ಒದೆ ತಿಂತೀಯಾ ಅಂತ ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ರಾಮಚಂದ್ರಪ್ಪನ ಮಗ ಧನುಶ್ ಕೆಸಿ ದಾಂಧಲೆ ಮಾಡಿದ್ದಾನೆ. ನಾನ್ ಹೇಳಿದಂಗೆ ಕೇಳ್ಬೇಕು ಇಲ್ದಿದ್ರೆ ಈ ರೆಸ್ಟೋರೆಂಟ್ ಇರಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಬರ್ತ್ಡೇ ಪಾರ್ಟಿ ಮಾಡಿದ ನಂತರ ರಾತ್ರಿ 11:30ಕ್ಕೆ ವಿಲೇಜ್ ರೆಸ್ಟೋರೆಂಟ್ಗೆ ಬಂದಿದ್ದ ಯುವಕರ ತಂಡ ಇಪ್ಪತ್ತು ಮಂದಿಗೆ ಊಟ ಆರ್ಡರ್ ಮಾಡಿದೆ. ರೆಸ್ಟೋರೆಂಟ್ ಸಿಬ್ಬಂದಿ ಕ್ಲೋಸಿಂಗ್ ಸಮಯ ಆಗಿರುವುದರಿಂದ ಊಟ ಸಿದ್ಧ ಮಾಡಲು ಆಗದು ಎಂದಿದ್ದಾರೆ.
ಇದರಿಂದ ಅಸಮಾಧಾನಗೊಂಡ ಯುವಕರು ತಾವು ಆರ್ಡರ್ ಮಾಡಿದ ಊಟವನ್ನೇ ಕೊಡುವಂತೆ ಆವಾಜ್ ಹಾಕಿ ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ. ಯುವಕರ ವರ್ತನೆಯನ್ನು ಪ್ರಶ್ನಿಸಿದ ಸರ್ವಿಸ್ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ಬಿಡಿಸಲು ಬಂದ ಇತರ ಸಿಬ್ಬಂದಿ ಮೇಲೂ ಹಲ್ಲೆ ಮಾಡ ಪೀಠೋಪಕರಣ, ಟೇಬಲ್ಗಳನ್ನು ಧ್ವಂಸ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿದರೂ ನೆರವಿಗೆ ಬಂದಿಲ್ಲ ಎಂದು ರಾತ್ರಿ ಪಾಳಿಯಲ್ಲಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದೆ. ಗಾಯಾಳು ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


