ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿ ರೋಡ್ ಶೋ ಮಾಡಿಸುವುದು ಮತ್ತು ನಡ್ಡಾರವರು ನರೇಂದ್ರ ಮೋದಿಯವರನ್ನು ನೋಡಿ ಮತ ನೀಡಿ ಎಂದರೂ ಜನ ಮತ ನೀಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ ಅವರು, ಇನ್ನು ಮುಂದೆ ಪ್ರಧಾನಿ ಮೋದಿಯವರ ಮೇಲೆ ಅವಲಂಬಿತರಾಗಬೇಡಿ. ಅವರು ಬಂದ ಕಡೆಯಲೆಲ್ಲಾ ಬಿಜೆಪಿ ಸೋತಿದೆ. 1980 ರಲ್ಲಿ ಜನತಾ ಲೋಕದಳದಿಂದ ಲೋಕಸಭಾ ಸ್ಪರ್ಧಿಯಾಗಿದ್ದೆ. ಆ ಸಂದರ್ಭದಲ್ಲಿ ಮಂಜುನಾಥ್ ಎಂದು ಕಾಂಗ್ರೆಸ್ ಅವರ ಅಭ್ಯರ್ಥಿಯಾಗಿದ್ದಾಗ, ಇಂದಿರಾ ಗಾಂಧಿ ಹೆಸರು ಹೇಳಿ, ಚುನಾವಣೆ ಗೆಲ್ಲುತ್ತೀರಿ ಎಂದು ಅವರಿಗೆ ಹೇಳಿದರು. ಆ ಕಾಲದಲ್ಲಿಯೂ ಕಾಂಗ್ರೆಸ್ ನವರಿಗೆ ಅಲ್ಲ, ಇಂದಿರಾಗಾಂಧಿ ಹಸರು ಹೇಳಿದರೆ ಚುನಾವಣೆ ಗೆಲ್ಲುತ್ತಿದ್ದರು. ಅಂತೆಯೇ, ಮೋದಿಯವರಿಗೂ ಹೆಸರು ಇತ್ತು. ಆದರೆ ಈಗ ಅದು ಮಂಕಾಗುತ್ತಿದೆ. ಪ್ರಧಾನಿ ಮೋದಿಯವರು ಜನಪ್ರಿಯ ನಾಯಕ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈಗ ಮಂಕಾಗುತ್ತಿದೆ. ಮೇಲಿದ್ದವರು ಕೆಳಗೆ , ಕೆಳಗಿದ್ದವರು ಮೇಲೆ ಬರಬೇಕು. ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ ಎಂದರು.
ಧರ್ಮಗಳ ನಡುವೆ ಬೆಂಕಿಯಿಡುವುದು ನಮ್ಮ ಪರಂಪರೆಯಲ್ಲ:
ಕರ್ನಾಟಕದ ಒಂದು ಸಾವಿರ ವರ್ಷಗಳ ಪರಂಪರೆಯನ್ನು ಭಾಷಣದಲ್ಲಿ ಮಾಡಿಕೊಟ್ಟಿದ್ದಾರೆ. ಕವಿರಾಜಮಾರ್ಗ ಶ್ರೀ ವಿಜಯ ದಲ್ಲಿ ಪರಧರ್ಮವನ್ನು , ಜೀವನ ಮಾರ್ಗಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದೇ ಆಸ್ತಿ ಮತ್ತುಒಡವೆ ಎಂದು ಅದರಲ್ಲಿ ತಿಳಿಸಿದ್ದಾರೆ. ಅದೇ ಸಮಾಜದ ಆಸ್ತಿ ಎಂದು ಅಲ್ಲಿ ತಿಳಿಸಲಾಗಿದೆ. ನಮ್ಮ ದೇಶದಲ್ಲಿ ಧರ್ಮಗಳು ಬೇರೆ ಇರಬಹುದು . ಆದರೆ ಎಲ್ಲ ಧರ್ಮಗಳ ಸಾರ ಒಂದೇ . ಮನುಷ್ಯರ ನಡುವೆ ಗೋಡೆ ಕಟ್ಟುವುದು, ಧರ್ಮಗಳ ನಡುವೆ ಬೆಂಕಿ ಇಡುವುದು ಅಮಾನವೀಯವಾದುದು. ಅದು ನಮ್ಮ ಪರಂಪರೆ ಅಲ್ಲ. ಎಲ್ಲರದರಲ್ಲೂ ವೈರುಧ್ಯಗಳಿದ್ದರೂ , ಏಕತೆಯನ್ನು ಕಾಣಬೇಕು. ಅದರಲ್ಲಿ ನಂಬಿಕೆ ಇಟ್ಟವರು ನಾವು. ಯಾವುದು ಒಂದು ಧರ್ಮ, ಜಾತಿಗೆ ಅಂಟಿಕೊಂಡವರಲ್ಲ ಎಂದರು.
ಜನರು ಆತಂಕದಿಂದ ಬದುಕಬೇಕಿಲ್ಲ :
ವಿದ್ಯಾಸಿರಿ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು. ಬಿಜೆಪಿ ಸರ್ಕಾರ ಇದನ್ನು ನಿಲ್ಲಿಸಿತ್ತು. ಈಗ ಮತ್ತೆ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಹೆಚ್ಚು ಒಣಭೂಮಿ ಇದ್ದಿದ್ದರಿಂದ ನಮ್ಮ ಸರ್ಕಾರ ಕೃಷಿಭಾಗ್ಯ ಯೋಜನೆ ಈಗ ಮತ್ತೆ ಪ್ರಾರಂಭಿಸಲಾಗಿದೆ. ಜಿಎಸ್ ಟಿ ತೆರಿಗೆ ಸಂಗ್ರಹ , ಅಬಕಾರಿ ಸುಂಕ ಹೆಚ್ಚಳ , ಮೋಟಾರ್ ವೆಹಿಕಲ್ ತೆರಿಗೆ , ಮುದ್ರಾಂಕ ಶುಲ್ಕ ಗಳನ್ನು ಹೆಚ್ಚಿಸಿ 13500 ಕೋಟಿ ಹೆಚ್ಚು ಸಂಗ್ರಹ ಮಾಡಲಾಗುತ್ತಿದೆ. 8000 ಕೋಟಿ ಸಾಲ ಪಡೆಯುತ್ತಿದ್ದೆವೆ. ನುಡಿದಂತೆ ನಡೆಯುತ್ತಿದ್ದೇವೆ. ನಾವು ನೀಡಿರುವ ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿಯವರು 600 ಭರವಸೆಗಳಲ್ಲಿ ಶೇ. 10 ರಷ್ಟೂ ಈಡೇರಿಸಿಲ್ಲ. ರೈತ ಸಾಲ ಮನ್ನಾ ಎಂದರು. ಆದರೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುದಾನ ನಿಗದಿಪಡಿಸಲಾಗಿದೆ. ಅನುಷ್ಠಾನ ಮಾಡುತ್ತಿದ್ದೇವೆ. 35,410 ಕೋಟಿ ಈ ವರ್ಷ ಉಳಿದ ಅವಧಿಗೆ ಬೇಕಾಗುತ್ತಿದ್ದು , ಅನುದಾನ ನಿಗದಿಪಡಿಸಲಾಗಿದೆ. ಎಲ್ಲ ಐದು ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದ್ದು , ಜಾರಿ ಮಾಡಿಯೇ ಮಾಡುತ್ತೇವೆ. ಜನರು ಯಾರೂ ಆತಂಕದಿಂದ ಬದುಕುವ ಅವಶ್ಯಕತೆ ಇಲ್ಲ. ಎಲ್ಲರಿಗೂ ಊಟ , ಕಾನೂನು ರಕ್ಷಣೆ , ಕೈಗೆ ಹಣ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


