ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಮಠವೊಂದರ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಚಿಕ್ಕಮಗಳೂರು ಮೂಲದ ಯುವತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಬಂಧಿತ ಯುವತಿಯನ್ನು ಸ್ಪೂರ್ತಿ ಎಂದು ಗುರುತಿಸಲಾಗಿದೆ. ಈಕೆ ಸುಮಾರು ಐದು ತಿಂಗಳ ಹಿಂದೆ ಸ್ವಾಮೀಜಿಯವರಿಗೆ ಫೋನ್ ಕರೆ ಮಾಡಿ ತಾನು ತಿಪಟೂರಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದಳು. ಕಾಲಕ್ರಮೇಣ ಚಾಟಿಂಗ್ ಮೂಲಕ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ ಈಕೆ, ನಂತರ ತನ್ನ ಅಸಲಿ ರೂಪ ತೋರಿಸಿದ್ದಾಳೆ.
ಹಣಕ್ಕಾಗಿ ಬೆದರಿಕೆ: ಸ್ವಾಮೀಜಿಯವರ ಜೊತೆಗಿನ ಸಂಪರ್ಕವನ್ನು ಬಳಸಿಕೊಂಡು ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಶುರುಮಾಡಿದ ಸ್ಪೂರ್ತಿ, ಹಣ ನೀಡದಿದ್ದರೆ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿಂದೆ ಸ್ವಾಮೀಜಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಅವರ ಬಳಿ 4.5 ಲಕ್ಷ ರೂಪಾಯಿಗಳನ್ನು ಪಡೆದಿದ್ದಳು. ಆದರೆ ಅಷ್ಟಕ್ಕೇ ತೃಪ್ತಳಾಗದ ಆಕೆ, ಮತ್ತೆ 1 ಕೋಟಿ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದಾಳೆ ಎನ್ನಲಾಗಿದೆ.
ಯುವತಿಯ ನಿರಂತರ ಕಿರುಕುಳ ಹಾಗೂ ಬೆದರಿಕೆಯಿಂದ ಆತಂಕಗೊಂಡ ಸ್ವಾಮೀಜಿ, ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಸ್ಪೂರ್ತಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಳೆಯ ಪ್ರಕರಣ: ಗಮನಾರ್ಹ ವಿಷಯವೆಂದರೆ, ಇದೇ ಸ್ವಾಮೀಜಿಯವರ ವಿರುದ್ಧ ಎರಡು ವರ್ಷಗಳ ಹಿಂದೆಯೂ ಹನಿಟ್ರ್ಯಾಪ್ ಯತ್ನ ನಡೆದಿತ್ತು. ಆ ಸಮಯದಲ್ಲಿ 6 ಕೋಟಿ ರೂ. ಬೇಡಿಕೆಯಿಟ್ಟಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಪ್ರಕರಣದ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ನ್ಯಾಯಾಲಯದ ಮೊರೆ ಹೋಗಿದ್ದು, ತಮಗೆ ಸಂಬಂಧಿಸಿದ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


