ಕೊರಟಗೆರೆ: ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯ ಪಕ್ಕದಲ್ಲಿರುವ ಪುಣ್ಯಕೋಟಿ ಫ್ಯಾಕ್ಟರಿಯಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಮಲ್ಲೇಶ್ವರ ಗ್ರಾಮದ ಯೋಗೇಶ್ (25) ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನಾಗಿದ್ದಾನೆ.
ಬಾಯ್ಲರ್ ಸ್ಫೋಟದ ಶಬ್ದ ಸುಮಾರು 1/2 ಕಿಲೋ ಮೀಟರ್ ವ್ಯಾಪ್ತಿಗೆ ಕೇಳಿದ್ದು ಸ್ಫೋಟದ ಶಬ್ದದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಟೋಟದಿಂದಾಗಿ ಫ್ಯಾಕ್ಟರಿ ಮಾಲಿಕನ ಮನೆಯ ಗೋಡೆಗಳು ಬಿರುಕು ಬಿದ್ದಿದೆ.
ಸ್ಫೋಟದಿಂದ ಸುಟ್ಟು, ಗಾಯಗೊಂಡಿದ್ದ ಕಾರ್ಮಿಕನಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಲಾಸ್ಟ್ ನಿಂದಾಗಿ ಕಾರ್ಮಿಕನ ದೇಹ ಸುಟ್ಟು ಕಿವಿ-ಮೂಗು-ಬಾಯಿಯಿಂದ ರಕ್ತಸ್ರಾವವಾಗಿದೆ.
ಸ್ಥಳೀಯರ ಪ್ರಕಾರ ಸುಮಾರು 15 ವರ್ಷಗಳಿಂದಲೂ ಮನೆಯಲ್ಲೇ ಪುಣ್ಯಕೋಟಿ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಫ್ಯಾಕ್ಟರಿ ಮಾಡಿಕೊಂಡು ಕೆಲಸ ಮಾಡಲಾಗುತ್ತಿತ್ತು ಎನ್ನಲಾಗಿದೆ. ಮಸಾಲೆ ಮಜ್ಜಿಗೆ, ಪೇಡ, ಜಾಮೂನ್, ಹಾಲು ಶುದ್ಧೀಕರಣ ಘಟಕ, ಹಾಲು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ವಿಡಿಯೋ ಮಾಡಲು ತಂದೆ– ಮಗ ಆಕ್ಷೇಪ!
ಬಾಯ್ಲರ್ ಸ್ಫೋಟದ ಮಾಹಿತಿ ತಿಳಿದು ಘಟನೆಯ ಚಿತ್ರೀಕರಣಕ್ಕೆ ತೆರಳಿದ್ದ ಪತ್ರಕರ್ತರ ಮೊಬೈಲ್ ಕಿತ್ತುಕೊಂಡು ಫ್ಯಾಕ್ಟರಿ ಮಾಲಿಕ ಹಾಗೂ ಆತನ ಮಗ ಉಡಾಫೆಯಾಗಿ ವರ್ತಿಸಿರುವ ಘಟನೆಯೂ ನಡೆದಿದೆ. “ಅವನಿನ್ನೂ ಸತ್ತಿಲ್ಲ” ಎಂದು ಗಾಯಗೊಂಡಿರುವ ಕಾರ್ಮಿಕನ ಬಗ್ಗೆ ನಿಕೃಷ್ಟವಾಗಿ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀಕಂಠೇಶ್ವರ ಎಂಟರ್ ಪ್ರೈಸಸ್ ನ ಮಾಲೀಕ ಸದಾಶಿವಯ್ಯ ಮತ್ತು ಮಗ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ನಡೆದಿದೆ. ಮಾಧ್ಯಮ ಪ್ರತಿನಿಧಿ ವಿಡಿಯೋ ಮಾಡುತ್ತಿದ್ದಾಗ ಮೊಬೈಲ್ ಕಸಿಯಲು ಮಾಲಿಕನ ಮಗ ಯತ್ನಿಸಿದ್ದಾನೆ.
ಅನಧಿಕೃತ ಫ್ಯಾಕ್ಟರಿ?
ಫ್ಯಾಕ್ಟರಿ ನಡೆಸಲು ಮಾಲಿಕ ಸಂಬಂಧಪಟ್ಟ ಯಾವುದೇ ಇಲಾಖೆಗಳಿಂದ ಅನುಮತಿಯೇ ಪಡೆಯದೆ ಅನಧಿಕೃತ ಫ್ಯಾಕ್ಟರಿ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಮನೆಯಲ್ಲೇ ಫ್ಯಾಕ್ಟರಿ ನಿರ್ಮಾಣ ಮಾಡಲಾಗಿದೆ. 6ಕ್ಕೂ ಹೆಚ್ಚು ಜನ ಕಾರ್ಮಿಕರು ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಫ್ಯಾಕ್ಟರಿ ನಡೆಸಲು ಸಂಬಂಧಪಟ್ಟ ಇಲಾಖೆಗಳಾದ ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿಯಿಂದ ಅನುಮತಿ, ಕಾರ್ಮಿಕರಿಗೆ ಪಿಎಫ್ ಇಎಸ್ ಐ ಸೌಕರ್ಯ ನಿರ್ವಹಿಸದೆ , ಪುಣ್ಯಕೋಟಿ ಎಂಬ ಹೆಸರಿನಲ್ಲಿ ಅಕ್ರಮ ಕಾರ್ಖಾನೆಯನ್ನ ನಿರ್ಮಿಸಿಕೊಂಡು ಕೆಲಸ ಮಾಡಿಸಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ಕೊರಟಗೆರೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್, ಸಬ್ ಇನ್ಸ್ಪೆಕ್ಟರ್ ಚೇತನ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA