ಹೊಸಪೇಟೆ (ವಿಜಯನಗರ): ಗುಂಡಿಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ನಗರಸಭೆ 7ನೇ ವಾರ್ಡ್‌ನ ಅನಂತಶಯನಗುಡಿಯಲ್ಲಿ ನಡೆದಿದ್ದು, ಘಟನೆ ಹಿನ್ನೆಲೆ ಸೋಮವಾರ ನಗರಸಭೆ ಸದಸ್ಯರು ನಗರಸಭಾ ಕಚೇರಿ ಮುಂಭಾಗ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಪಕ್ಷಾತೀತವಾಗಿ ಧರಣಿ ನಡೆಸಿದ ಸದಸ್ಯರು ಪೌರಾಯುಕ್ತ ಚಂದ್ರಪ್ಪ ಅವರ ಅಮಾನತಿಗೆ ಒಕ್ಕೊರಲ ಒತ್ತಾಯ ಮಾಡಿದರು.
ಸದ್ಯ ನಗರಸಭೆಯಲ್ಲಿ ಅಧ್ಯಕ್ಷರಿಲ್ಲ, ಜಿಲ್ಲಾಧಿಕಾರಿ ಅವರೇ ಆಡಳಿತಾಧಿಕಾರಿ ಆಗಿದ್ದು, ಅವರ ಅಧಿಕಾರ ಅವಧಿಯಲ್ಲಿ ಮಗು ಸತ್ತಿದೆ, ಸ್ವತಃ ಡಿ.ಸಿ ಅವರೇ ಸ್ಥಳಕ್ಕೆ ಬರಬೇಕು, ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರು.
ಬೆಳಿಗ್ಗೆ 10 ಗಂಟೆಗೆ ಆರಂಭವಾದ ಧರಣಿ ಸ್ಥಳಕ್ಕೆ ಮಧ್ಯಾಹ್ನ 1 ಗಂಟೆಯಾದರೂ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಬರಲಿಲ್ಲ, ಪೌರಾಯುಕ್ತರು, ಶಾಸಕರು ಸಹ ಬರಲಿಲ್ಲ. ಹೀಗಾಗಿ ಸಂಜೆಯವರೆಗೂ ಧರಣಿ ಮುಂದುವರಿಸಲು ಸದಸ್ಯರು ನಿರ್ಧರಿಸಿದರು.
7ನೇ ವಾರ್ಡ್ ಸದಸ್ಯೆ ಕನಕಮ್ಮ ಅವರು 15 ದಿನದ ಹಿಂದೆಯೇ ಜನವಸತಿ ಪ್ರದೇಶದಲ್ಲಿ ಖಾಸಗಿ ಸ್ಥಳದಲ್ಲಿ ಇರುವ ಗುಂಡಿಯ ಬಗ್ಗೆ ಆಯುಕ್ತರಿಗೆ ದೂರು ಕೊಟ್ಟಿದ್ದರು ಹಾಗೂ ಗುಂಡಿ ಮುಚ್ಚಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಮನವಿಯನ್ನು ಆಯುಕ್ತರು ಕಡೆಗಣಿಸಿದ್ದರು. ಖಾಸಗಿ ಸ್ಥಳದಲ್ಲಿ ಗುಂಡಿ ಮುಚ್ಚಿಸಲು ಅವರು ಖಾಸಗಿ ವ್ಯಕ್ತಿಗೆ ನೋಟಿಸ್ ಸಹ ನೀಡಿರಲಿಲ್ಲ ಎಂದು ಧರಣಿ ವೇಳೆ ಸ್ವತಃ ಕನಕಮ್ಮ ಹೇಳಿದರು.
ಸದಸ್ಯರು ಆಯುಕ್ತ ಚಂದ್ರಪ್ಪ ಅವರ ಪ್ರತಿಕೃತಿಯನ್ನು ತಮ್ಮ ಮುಂದುಗಡೆಯೇ ಇಟ್ಟಿದ್ದರು. ಒಂದು ಹಂತದಲ್ಲಿ ಪ್ರತಿಕೃತಿ ದಹಿಸಲು ಸಹ ಯತ್ನಿಸಿದರು. ಆದರೆ, ಪೊಲೀಸರ ಸೂಚನೆಯಂತೆ ಅದನ್ನು ಆ ಹಂತದಲ್ಲಿ ಮುಂದೂಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


