ಮೆದುಳು ಜ್ವರಕ್ಕೆ ಬಾಲಕನೊಬ್ಬ ಬಲಿಯಾದ ಹೃದಯ ವಿದ್ರಾವಕ ಘಟನೆ ವಿಜಯಪುರ ನಗರದ ಗೋಳಗುಮ್ಮಟ ಏರಿಯಾದಲ್ಲಿ ನಡೆದಿದ್ದು, ಮೃತ ಬಾಲಕನನ್ನು ರಜಿತ್ ಮಿಥುನ್ ಅಳ್ಳಿಮೋರೆ(10) ಎಂದು ಗುರುತಿಸಲಾಗಿದೆ. ಈತ ಗೋಳಗುಮ್ಮಟ ಬಡವಾಣೆ ನಿವಾಸಿ ಎಂದು ತಿಳಿದು ಬಂದಿದೆ.
ಕಳೆದ ವಾರದ ಹಿಂದೆ ರಜಿತ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರಜಿತ್ ನನ್ನು ದಾಖಲಿಸಲಾಗಿತ್ತು. ಜ್ವರ ನೆತ್ತಿಗೆ ಏರಿ ಮೆದುಳಲ್ಲಿ ಬಾವು ಬಂದಿತ್ತು. ಈ ಕಾರಣದಿಂದಾಗಿ ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆಂದು ತಿಳಿದು ಬಂದಿದೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


