ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹೆಚ್ಚಾಗಿ ಎಲ್ಲೆಡೆ ಬೆಳೆ ಹಾನಿ, ಆಸ್ತಿಪಾಸ್ತಿ ಹಾನಿಯಾಗಿದ್ದು ಮಳೆ ಬಂದಾಗ ಸಾಮಾನ್ಯವಾಗಿ ರಸ್ತೆಗಳು ಸೇತುವೆಗಳು ಹಾಳಾಗುವುದು ಕಾಣುತ್ತಿದ್ದೇವೆ ಆದರೆ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ತಾಲೂಕಿನ ಹಲವು ಕೆರೆಕಟ್ಟೆಗಳು ತುಂಬಿ ಗರುಡಾಚಲ,ಸುವರ್ಣಮುಖಿ, ಜಯಮಂಗಲಿ ನದಿಗಳು ಮೈದುಂಬಿ ಹರಿದಿವೆ ಕೆಲವೆಡೆ ನದಿಗಳು ಹರಿದ ರಭಸಕ್ಕೆ ಸೇತುವೆಗಳು ಕೊಚ್ಚಿ ಹೋಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಾಣದಾಗಿ ಈ ಭಾಗದ ಜನರ ಓಡಾಟ ಹೇಳತೀರದಾಗಿದೆ..
ಅದೇ ರೀತಿಯಾಗಿ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಬೈಚಾಪುರ ಗ್ರಾಮ ಪಂಚಾಯಿತಿಗೆ ಸೇರಿದ ತೊಗರಿಘಟ್ಟ,ಪಣ್ಣೇನಹಳ್ಳಿ ಹನುಮೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ಎರಡು ಸೇತುವೆಗಳು ಕೊಚ್ಚಿ ಹೋಗಿ ಸುಮಾರು ಎರಡು ತಿಂಗಳುಗಳಿಂದ ಈ ಗ್ರಾಮಗಳ ಜನರು ಓಡಾಡಲು ಕಷ್ಟಕರವಾಗಿದೆ ಗೃಹ ಸಚಿವರ ತವರಲ್ಲಿಯೇ ಇಂತಹ ಸೇತುವೆಗಳಿಂದ ಜನರಿಗೆ ಕಂಟಕ ಎದುರಾಗಿದೆ..
ಈ ಭಾಗದ ಜನರು ಸ್ಥಳೀಯ ಜನ ಪ್ರತಿನಿಧಿಗಳು ತಹಶೀಲ್ದಾರ್ ತಾಲೂಕು ಪಂಚಾಯಿತಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡುತ್ತಾರೆ.
ಪ್ರತಿನಿತ್ಯ ಪಣೇನಹಳ್ಳಿ, ತೊಗರಿಘಟ್ಟ ಹನುಮೇನಹಳ್ಳಿ, ಚಿಕ್ಕನಹಳ್ಳಿ ಸೇರಿದಂತೆ ದುಗ್ಗೇನಹಳ್ಳಿ, ಬೀಡಿಪುರ ಬೈಚಾಪುರಕ್ಕೆ ಸಂಪರ್ಕಿಸುವ ಈ ರಸ್ತೆಗಳು ಶಾಲಾ ಮಕ್ಕಳಿಗೆ ವೃದ್ಧರಿಗೆ ದ್ವಿಚಕ್ರ ವಾಹನ ಸವಾರರಿಗೆ ಕಂಟಕಪ್ರಾಯವಾಗಿವೆ.
ನದಿಗಳು ಹರಿದ ರಭಸಕ್ಕೆ ಸೇತುವೆಗೆ ಅಳವಡಿಸಲಾಗಿದ್ದ ಸಿಮೆಂಟಿನ ರಿಂಗ್ ಗಳು ನೀರಿನ ಸೇಳತಕ್ಕೆ ಸೇತುವೆ ಕೊಚ್ಚಿ ಹೋಗಿವೆ. ಈ ಭಾಗದಲ್ಲಿ ಸುಮಾರು 12 ಅಡಿಗೂ ಹೆಚ್ಚು ಆಳ ಗುಂಡಿ ಬಿದ್ದು ಗ್ರಾಮಗಳನ್ನು ಸಂಪರ್ಕಿಸುವ ಕೊಂಡಿ ತಪ್ಪಿದಂತಾಗಿದೆ.
ಹನುಮೇನಹಳ್ಳಿ ಗ್ರಾಮದ ಮುಖಂಡ ಮಂಜುನಾಥ್ ಅವರು ಮಾತನಾಡುತ್ತಾ ಸುಮಾರು ಎರಡು ತಿಂಗಳುಗಳಿಂದ ಈ ಸೇತುವೆ ಕೊಚ್ಚಿ ಹೋಗಿ ಶಾಲಾ ಮಕ್ಕಳು ಸೇರಿದಂತೆ ಪಿಂಚಣಿ ಹಾಗೂ ಸರ್ಕಾರಿ ಕೆಲಸಕ್ಕೆ ತೆರಳುವ ಸಾರ್ವಜನಿಕರು ವೃದ್ಧರಿಗೆ ಬಹಳ ಸಂಕಷ್ಟ ಎದುರಾಗಿದೆ ಈ ಬಗ್ಗೆ ಅನೇಕ ಬಾರಿ ಮನವಿ ನೀಡಿದರು ಯಾರು ಕೂಡಾ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಈಗಾಗಲೇ ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಸಂಪರ್ಕ ಕೊಂಡಿಯಂತಿರುವ ರಸ್ತೆಯನ್ನು ಸರಿಪಡಿಸುವಂತೆ ಮನವಿ ನೀಡಿದ್ದೇವೆ ದಯಮಾಡಿ ನಮಗೆ ಸಂಪರ್ಕಿಸುವ ಎರಡು ರಸ್ತೆಗಳನ್ನ ಸರಿಪಡಿಸಬೇಕು ಇಲ್ಲವೇ ತಾತ್ಕಾಲಿಕವಾಗಿ ರಸ್ತೆ ಸಂಚರಿಸುವ ಮಾರ್ಗವನ್ನು ಗುರುತಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಪಣ್ಣೇನಹಳ್ಳಿಯ ಗ್ರಾಮಸ್ಥ ಶ್ರೀನಿವಾಸ್ ಅವರು ಮಾತನಾಡುತ್ತಾ ಚುನಾವಣಾ ಸಮಯದಲ್ಲಿ ಆಗಮಿಸುವ ಜನಪ್ರತಿನಿಧಿಗಳು ಒಂದು ಊರಿಗೆ ರಸ್ತೆ ಸೇರಿದಂತೆ ಇತರೆ ಸೌಕರ್ಯಗಳು ಕೆಟ್ಟು ಹೋದ ಸಂದರ್ಭದಲ್ಲಿ ಬರುವುದಿಲ್ಲ ನಮ್ಮ ಗ್ರಾಮಗಳಿಗೆ ರಸ್ತೆ ಸಂಪರ್ಕ ಇಲ್ಲದೆ ಅನೇಕ ಪಿಂಚಣಿ ತೆಗೆದುಕೊಳ್ಳಲಾಗದೆ ವೃದ್ಧರು ಪರದಾಡುತ್ತಿದ್ದಾರೆ ಪ್ರತಿನಿತ್ಯ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ಈ ಭಾಗವಾಗಿ ಸಂಚರಿಸುತ್ತಾರೆ. ಕೇವಲ ಒಂದು ದ್ವಿಚಕ್ರ ವಾಹನ ಹೋಗುವಂತಹ ಬಂಡೆ ಕಲ್ಲನ್ನ ಗ್ರಾಮಸ್ಥರೇ ಹಾಕಿಕೊಂಡು ತೆರಳುತ್ತಿದ್ದೇವೆ, ಜಿಲ್ಲಾಧಿಕಾರಿ, ಸಿಇಓ ಸೇರಿದಂತೆ ಇತರೆ ಅಧಿಕಾರಿಗಳು ಕಣ್ಣಿಗೆ ಕಾಣುವಂತಹ ಮಳೆ ಹಾನಿ ಪ್ರದೇಶಕ್ಕೆ ಮಾತ್ರ ತೆರಳುತ್ತಾರೆ ಇಂತಹ ಕುಗ್ರಾಮಗಳಿಗೆ ಸಂಪರ್ಕಿಸುವ ದುರ್ಗಮ ಪರಿಸ್ಥಿತಿಯ ರಸ್ತೆಗಳ ಮಾಹಿತಿ ಅವರುಗಳಿಗೆ ಇರುವುದೇ ಇಲ್ಲ ಹೀಗಾಗಿ ಕೂಡಲೇ ಈ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಹೀಗೆ ಕೊರಟಗೆರೆ ತಾಲೂಕಿನ ಗಡಿ ಭಾಗ ಸೇರಿದಂತೆ ಅನೇಕ ಗ್ರಾಮಗಳು ಮೂಲ ಸೌಕರ್ಯಗಳಿಲ್ಲದೆ ಸಂಪರ್ಕಗಳನ್ನು ಕಳೆದುಕೊಂಡು ಪರದಾಡುತ್ತಿದ್ದರು ಯಾರೊಬ್ಬರೂ ಇತ್ತ ಕಡೆ ಗಮನ ಹರಿಸದೇ ಇರುವುದು ಅಭಿವೃದ್ಧಿ ಪಡಿಸದೇ ಇರುವುದು ಸೂಚನೆಯ ಸಂಗತಿ ಎಂದು ಈ ಗ್ರಾಮಗಳ ಗ್ರಾಮಸ್ಥರು ಗೊಣಗಿಕೊಳ್ಳುತ್ತಾರೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಂಡು ಶೀಘ್ರವೇ ಸೇತುವೆ ಕಾಮಗಾರಿ ಆರಂಭ ಮಾಡುತ್ತಾರಾ ಎಂದು ಕಾದು ನೋಡೋಣ..
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q