ಗೋಕಾಕ್ : ಬಿಜೆಪಿ ಸರ್ಕಾರ ಜನವಿರೋಧಿ ಸರ್ಕಾರ, ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು , ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಜನತೆಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ಬಡವರ ಪರ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಬಿಜೆಪಿಯಿಂದ 10% ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಅದರ ಬದಲಿಗೆ ಯದ್ವಾತದ್ವಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದ ಅವರು, ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರು ಪಿಎಂಗೆ ಪತ್ರ ಬರೆದಿದ್ದಾರೆ.
ಮೋದಿ ಹೇಳ್ತಾರೆ ‘ನಾ ಖಾವೂಂಗಾ, ನಾ ಖಾನೆದೂಂಗಾ’ ಎಂದು. ನಾನು ಪಿಎಂ ಮೋದಿಗೆ ಕೇಳ್ತೀನಿ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ಮಾಡಲು ಯಾಕೇ ಅವಕಾಶ ಕೊಟ್ಟಿದ್ದಿರಾ? ಎಂದು ಬಿಜೆಪಿ ಸರ್ಕಾರ ವಿರುದ್ದ ಚಾಟಿ ಬೀಸಿದರು.
ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ: ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬೀದಿ ಬೀದಿಗಳಲ್ಲಿ ಜನತೆ ಮಾತನಾಡಿಕೊಳ್ತಿದ್ದಾರೆ. ಈ ಭಾರಿ ಗೋಕಾಕ್ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಜನರು ಬದಲಾವಣೆ ಬಯಸಿದ್ದು, ಭ್ರಷ್ಟ ಬಿಜೆಪಿ ಸರ್ಕಾರವನ್ನು ಬೇರು ಮಟ್ಟದಿಂದ ಕಿತ್ತು ಹಾಕಲು ಜನ ತುದಿಗಾಲಲ್ಲಿ ನಿಂತಿದ್ದಾರೆ ಎಂದ ಅವರು, ಈ ಬಾರಿ ನೀವೆಲ್ಲರೂ ಭಯಪಡದೇ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿಗೆ ಮತ ನೀಡಲು ಮುಂದಾಗಬೇಕೆಂದು ಮನವಿ ಮಾಡಿದರು.
ಮಾಜಿ ಶಿಷ್ಯನ ವಿರುದ್ಧ ಗುಡುಗಿದ ಸಿದ್ದು: ಗೋಕಾಕ್‌ದಲ್ಲಿ ಕಾನೂನು ಸುವವ್ಯಸ್ಥೆ ಹಾಳಾಗಿದೆ. ಇಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಪ್ರಜೆಗಳನ್ನು ಭಯದಲ್ಲಿ ಇಟ್ಟುಕೊಳ್ಳುವವರು ರಾಜಕಾರಣದಲ್ಲಿ ಇರಬಾರದು. ಮುಖ್ಯವಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆಗಳು ಎಂದ ಅವರು, ಅಧಿಕಾರದ ಆಸೆಗಾಗಿ ಸಮ್ಮಿಶ್ರ ಸರ್ಕಾರವನ್ನು ಕೆಡವಿದರು, ಆದರೆ ಅವರ ಮಂತ್ರಿಗಿರಿ ಯಾತಕ್ಕಾಗಿ ಹೋಯ್ತು ಅನ್ನೋದು ನಿಮಗೆ ಗೊತ್ತಿದೆ ತಾನೆ. ಇಂತಹ ಕೀಳುಮಟ್ಟದ ವ್ಯಕ್ತಿ ರಾಜಕಾರಣದಲ್ಲಿ ಇರೋದಕ್ಕೆ ನಾಲಾಯಕ್ ಎಂದು ತಮ್ಮ ಮಾಜಿ ಶಿಷ್ಯ ರಮೇಶ ಜಾರಕಿಹೊಳಿ ವಿರುದ್ದ ಹರಿಹಾಯ್ದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಜನ ಸಾಮಾನ್ಯರ ಜೀವನ ಸುಧಾರಿಸಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಗೋಕಾಕ್‌ದಲ್ಲಿ ಈ ಭಾರೀ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಈ ಕನಸನ್ನು ನನಸು ಮಾಡಲು ಅಶೋಕ ಪೂಜಾರಿ ಸೇರಿದಂತೆ ಎಲ್ಲರೂ ಒಗ್ಗಟಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಮುಂದಾಗೋಣ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹಾಂತೇಶ ಕಡಾಡಿ, ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ದಸ್ತಗೀರ್ ಪೈಲ್ವಾನ್, ಬಸನಗೌಡ ಹೊಳೆಯಾಚಿ, ಎಂ.ಕೆ.ಪೂಜಾರಿ, ಇಮ್ರಾನ್ ತಪಕೀರ್, ಭಗವಂತ ಹಳ್ಳಿ, ಮುನ್ನಾ ಖತೀಬ್, ಪ್ರಕಾಶ ಬಾಗೋಜಿ, ವಿವೇಕ ಜತ್ತಿ, ಸಿದ್ಧಲಿಂಗ ದಳವಾಯಿ, ರಮೇಶ ಪಟಗುಂದಿ, ಚಂದ್ರಶೇಖರ್ ಕೊಣ್ಣೂರ, ಸಂಜೀವ್ ಪೂಜಾರಿ, ಜಾಕೀರ್, ಪ್ರಕಾಶ, ಕಲ್ಪನಾ ಜೋಶಿ, ಪ್ರೇಮಾ ಚಿಕ್ಕೋಡಿ ಸೇರಿದಂತೆ ಅನೇಕ ಮುಖಂಡರು ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


