ಊಟಿ: ನಿರ್ಮಾಣ ಹಂತದ ಮನೆ ಕುಸಿದು ಬಿದ್ದು ಆರು ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟ ಧಾರುಣ ಘಟನೆ ತಮಿಳುನಾಡಿನ ಊಟಿ ಸಮೀಪದ ಲವ್ ಡೇಲ್ ನಲ್ಲಿ ನಡೆದಿದೆ. ಮೃತರನ್ನು ಸಕಿಲಾ (30), ಸಂಗೀತಾ (35), ಭಾಗ್ಯ (36), ಉಮಾ (35), ಮುತ್ತುಲಕ್ಷ್ಮಿ (36) ಮತ್ತು ರಾಧಾ (38) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರು ಕಾರ್ಮಿಕರನ್ನು ಊಟಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಕಾರ್ಮಿಕ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಸಲಾಗುತ್ತಿದೆ ಎಂದು ಊಟಿ ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣ ಕಾರ್ಯಪ್ರವೃತ್ತರಾಗಿ, ಸಿಲುಕಿದವರನ್ನು ಹೊರಕ್ಕೆ ತೆಗೆಯುವ ಪ್ರಕ್ರಿಯೆ ನಡೆಸಿದರು. ಗಾಯಾಳುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.


