ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನಿಕಗೊಳಿಸಲು ಮತ್ತು ಪರಿಸರ ಸ್ನೇಹಿಯಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. 2,000 ಕೋಟಿ ರೂಪಾಯಿ ವೆಚ್ಚದಲ್ಲಿ ‘ಕರ್ನಾಟಕ ಎಲೆಕ್ಟ್ರಿಕ್ ಬಸ್ ಪ್ರೋಗ್ರಾಂ’ (KEBP) ಜಾರಿಗೆ ತರಲಾಗುತ್ತಿದ್ದು, ಇದರ ಅಡಿಯಲ್ಲಿ 4,000 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ನಿಗಮಗಳಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) 32 ಎಲೆಕ್ಟ್ರಿಕ್ ಬಸ್ ಡಿಪೋಗಳು ಹಾಗೂ ಇತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ (KSRTC, NWKRTC, KKRTC) 62 ಡಿಪೋಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಎಲೆಕ್ಟ್ರಿಕ್ ಬಸ್ ಗಳ ಜೊತೆಗೆ, 2026-27ನೇ ಸಾಲಿನಲ್ಲಿ 1,000 ಹೊಸ ಡೀಸೆಲ್ ಬಸ್‌ಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 6,596 ಬಸ್‌ಗಳನ್ನು ಈಗಾಗಲೇ ನಿಗಮಗಳಿಗೆ ಸೇರಿಸಲಾಗಿದೆ.
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಯು ಯಶಸ್ವಿಯಾಗಿ ಮುಂದುವರಿಯಲಿದ್ದು, 2026-27ನೇ ಸಾಲಿಗೆ 3,000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈವರೆಗೆ ಮಹಿಳೆಯರು ಒಟ್ಟು 684 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಸಾರಿಗೆ ನೌಕರರ ದೀರ್ಘಕಾಲದ ಬೇಡಿಕೆಯಂತೆ, 2021ರ ಜನವರಿಯಿಂದ 2023ರ ಫೆಬ್ರವರಿವರೆಗಿನ ವೇತನ ಬಾಕಿ (Arrears) ಪಾವತಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಏಪ್ರಿಲ್ 1, 2025 ರಿಂದ ಹೊಸ ವೇತನ ಪರಿಷ್ಕರಣೆ ಜಾರಿಗೆ ಬರಲಿದ್ದು, ಇದಕ್ಕಾಗಿ 1,271 ಕೋಟಿ ರೂ. ಮೀಸಲಿಡಲಾಗಿದೆ.
ಅಪಘಾತದ ‘ಬ್ಲಾಕ್ ಸ್ಪಾಟ್’ಗಳನ್ನು ಗುರುತಿಸಿ ನಿರ್ವಹಿಸಲು ಐಐಟಿ ಮದ್ರಾಸ್ ಮತ್ತು ಎನ್‌ಐಸಿ ಸಹಯೋಗದೊಂದಿಗೆ 5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುವುದು.
ರಾಜ್ಯದ ಸಾರಿಗೆ ಕ್ಷೇತ್ರದಿಂದ ಈ ವರ್ಷ 11,630 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 8.5 ರಷ್ಟು ಪ್ರಗತಿ ಕಂಡುಬಂದಿದೆ. ಮುಂದಿನ ಸಾಲಿನಲ್ಲಿ ಮೋಟಾರು ವಾಹನ ತೆರಿಗೆಯಿಂದ 15,500 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


