ಬೆಂಗಳೂರು, ಸ್ವಯಂ ಘೋಷಣೆಯ ಆಧಾರಿತ ಭೂ ಪರಿವರ್ತನೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎರಡು ಮೂರು ದಿನಗಳಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವ ತಿದ್ದುಪಡಿಗೆ ಸರ್ಕಾರ ಮುಂದಾಗಿರುವ ಬಗ್ಗೆ ರೈತರು ಆಕ್ರೋಶಗೊಂಡಿದ್ದು ಭೂ ಪರಿವರ್ತನೆ ತಿದ್ದುಪಡಿ ಮಾಡಿದಲ್ಲಿ ಉಗ್ರ ಹೋರಾಟ ಮಾಡುವ ಬಗ್ಗೆ ರೈತರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಪರಿಚ್ಛೇದ 95 ರಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ. ಈ ತಿದ್ದುಪಡಿ ಪ್ರಕಾರ ಯಾವುದೇ ಬಳಕೆಗಾಗಿ ಸ್ವಯಂ ಘೋಷಣೆಯನ್ನು ನೀಡುವ ಮೂಲಕ ಕೃಷಿ ಭೂಮಿಯ ಮಾಲೀಕರು ತಮ್ಮ ಭೂಮಿಯನ್ನು ಕೃಷಿಯೇತರ ಕಾರ್ಯಕ್ಕೆ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈಗಿರುವ ನಿಯಮದಂತೆ ಭೂ ಪರಿವರ್ತನೆಯ ಅರ್ಜಿಯನ್ನು ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳ ಮೂಲಕ ಯೋಜನಾ ಪ್ರಾಧಿಕಾರಕ್ಕೆ ರವಾನಿಸುತ್ತದೆ. ಅಲ್ಲಿಂದ ಎಲ್ಲಾ ಭೂಸ್ಸಾಧಿನ ಅಧಿಕಾರಿಗಳು, ತಹಶೀಲ್ದಾರ್, ರೆವಿನ್ಯೂ ಇನ್‍ಸ್ಪೆಕ್ಟರ್ ಮೂಲಕ ಕೊನೆಯದಾಗಿ ಗ್ರಾಮ ಲೆಕ್ಕಾಕಾರಿಗೆ ಅರ್ಜಿ ತಲುಪುತ್ತದೆ. ಪರಿವರ್ತನೆ ಅನುಮತಿಗಾಗಿ ಅರ್ಜಿ ನಮೂನೆಯನ್ನು ತಹಶೀಲ್ದಾರ್ ಅಥವಾ ಉಪವಿಭಾಗಾಕಾರಿ ಗೆ ಸಲ್ಲಿಸಬೇಕಾಗಿದೆ.
ಅರ್ಜಿಯನ್ನು ಸ್ವೀಕರಿಸಿದ ನಂತರ, ಸೂಕ್ತ ಅಧಿಕಾರಿಗಳು ಆಸ್ತಿಯ ಶೀರ್ಷಿಕೆ, ಯಾವುದೇ ಹೊರೆಗಳು ಮತ್ತು ಮುಂತಾದವುಗಳನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಪರಿಶೀಲನೆಯ ನಂತರ, ತಹಶೀಲ್ದಾರ್ ಅಥವಾ ಉಪವಿಭಾಗಾಕಾರಿ (ಎಸ್‍ಡಿಒ) ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದೇ ಆಕ್ಷೇಪಣೆಗಳಿಲ್ಲ ಮತ್ತು ಭೂಮಿ ಮಾಸ್ಟರ್ ಪ್ಲಾನ್‍ನ ಗಡಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.
ಅರ್ಜಿದಾರರಿಗೆ ಭೂ ಬಳಕೆಯ ಬದಲಾವಣೆ ಅನುಮೋದನೆಯನ್ನು ನೀಡಲಾಗುತ್ತದೆ. ಅನುಮೋದನೆಯ ನಂತರ 30 ದಿನಗಳಲ್ಲಿ, ತಹಶೀಲ್ದಾರ್ ಭೂ ಪರಿವರ್ತನೆಯ ಮಾಹಿತಿಯನ್ನು ನವೀಕರಿಸುತ್ತಾರೆ. ಈ ವಿವಿಧ ಹಂತಗಳಲ್ಲಿ ಅರ್ಜಿ ವಿಲೇವಾರಿಗೆ ಏಳೆಂಟು ತಿಂಗಳು ತಡವಾಗುತಿದೆ
ಹೊಸ ತಿದ್ದುಪಡಿ ನಿಯಮ ಹೇಗೆ?: ಹೊಸ ನಿಯಮದ ಪ್ರಕಾರ ಭೂ ಮಾಲೀಕ ಸ್ವಯಂಘೋಷಣೆಯೊಂದಿಗೆ ಭೂ ಪರಿವರ್ತನೆ ಮಾಡಬಹುದಾಗಿದೆ. ಸ್ವಯಂಘೋಷಣೆ ಕ್ರಮಬದ್ಧವಾಗಿದೆಯೇ ಎಂಬುದನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಾರೆ. ಕೇವಲ ಎರಡು ಮೂರು ದಿನಗಳಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಈಗ ಸ್ಚಯಂ ಘೋಷಣೆ ಆಧಾರಿತ ಭೂ ಪರಿವರ್ತನೆಯಿಂದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy