ತುಮಕೂರು: ಶನಿವಾರ ನಡೆದ ಪಾವಗಡದ ಬಸ್ ದುರಂತದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದ್ದು, ತುಮಕೂರು ಜಿಲ್ಲೆಯಲ್ಲಿ ಜವರಾಯನ ಅಟ್ಟಹಾಸಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಚಾಲಕನ ಅಜಾಗರೂಕತೆಯ ಚಾಲನೆಯಿಂದ ಪ್ರಾಣ ಕಳೆದುಕೊಂಡ ಅಮಾಯಕರು ಒಂದೆಡೆಯಾದರೆ, ಸಾಕಷ್ಟು ಕನಸುಗಳನ್ನು ಹೊತ್ತು ವಿದ್ಯಾಭ್ಯಾಸಕ್ಕಾಗಿ ಹಳ್ಳಿಯಿಂದ ಪಾವಗಡ ಪಟ್ಟಣಕ್ಕೆ ಆಗಮಿಸಿ ವಿದ್ಯಾಭ್ಯಾಸದಲ್ಲಿ ನಿರತರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಸಮೀಪವಿರುವ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎನ್ನುವ ಆತಂಕ ಸೃಷ್ಟಿಯಾಗಿದೆ. ಈ ಅಪಘಾತದಲ್ಲಿ ಗಾಯಗೊಂಡ ಯುವಕ ರಾಜು ಎಂಬಾತ ತನ್ನ ಎಡಕೈ ಅನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾನೆ.
ಇತ್ತೀಚೆಗೆ ಯುವಕ ರಾಜು ಗಾರೆ ಕೆಲಸ ನಿರ್ವಹಿಸುತ್ತಿದ್ದು, ಕುಟುಂಬದ ನಿರ್ವಹಣೆಯ ಜವಾಬ್ದಾರಿಯನ್ನು ತಾನು ಹೊತ್ತುಕೊಂಡಿದ್ದ. ಇತ್ತೀಚೆಗೆ ಆತ ತನ್ನ ತಂಗಿಯ ಮದುವೆಯನ್ನು ಸಹ ನೆರವೇರಿಸಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಸಾಲವನ್ನು ಮಾಡಿದ್ದಾನೆ. ಸಾಲ ತೀರಿಸುವ ಸಲುವಾಗಿ ಪ್ರತಿನಿತ್ಯ ಗರೆ ಕೆಲಸಕ್ಕಾಗಿ ಪಾವಗಡಕ್ಕೆ ಆಗಮಿಸುತ್ತಿದ್ದ ಇದರ ನಡುವೆಯೇ ಇಂದು ನಡೆದ ಬಸ್ ಅಪಘಾತದಲ್ಲಿ ರಾಜು ತನ್ನ ಎಡಗೈಯನ್ನು ಕಳೆದುಕೊಂಡು ದಿಗ್ಬ್ರಾಂತನಾಗಿದ್ದಾನೆ.
ಪುಡಿಪುಡಿಯಾದ ಎಡಗೈನ ವೈದ್ಯರು ಏನಾದರೂ ಮಾಡಿ ಪುನಃ ಜೋಡಿಸಬೇಕು ಎಂದು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಯುವಕ ರಾಜುನನ್ನ ವೈದ್ಯರು ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ ಆದರೆ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಯುವಕ ರಾಜು ಕೈಯನ್ನು ಕಳೆದುಕೊಳ್ಳುವ ಮೂಲಕ ತನ್ನ ನೋವನ್ನು ತಾನೇ ನುಂಗುತ್ತಾ ಮೌನವಾಗಿದ್ದು ದುರಂತವೇ ಸರಿ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯುವಕ ರಾಜುವಿನ ಸಂಬಂಧಿ, ಕೂಲಿ ಕೆಲಸ ಮಾಡುತ್ತಿದ್ದ ನನ್ನ ತಮ್ಮ ಈಗ ಕೈಯನ್ನ ಕಳೆದುಕೊಂಡು ಮನೆಯಲ್ಲಿ ಕೂರುವಂತಾಗಿದೆ ಈಗ ನಮ್ಮ ಕುಟುಂಬದ ನಿರ್ವಹಣೆಗೆ ಯಾರು ಹೊಣೆ ? ಸರ್ಕಾರದ ನಿರ್ಲಕ್ಷದಿಂದ ಘಟನೆಗಳು ಮರುಕಳಿಸುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಕೆಎಸ್ಸಾರ್ಟಿಸಿ ಇಲಾಖೆ ಸಾರ್ವಜನಿಕರ ಮನವಿಗೆ ಸ್ಪಂದಿಸಿದ್ದರೆ ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ. ಇಂದಿನ ಘಟನೆಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಯುವಕ ರಾಜುವಿನ ಸಂಬಂಧಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಒಂದೇ ಆಂಬುಲೆನ್ಸ್ ನಲ್ಲಿ ಇಬ್ಬರು ರೋಗಿಗಳ ಸ್ಥಳಾಂತರ:
ದುರಂತದಲ್ಲಿ ಸಂಪೂರ್ಣವಾಗಿ ಕೈಯನ್ನು ಕಳೆದುಕೊಂಡಿರುವ ಯುವಕ ರಾಜುನ ನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಶನಿವಾರ ಮಧ್ಯಾಹ್ನ 2 ವೇಳೆಯಲ್ಲಿ ಸ್ಥಳಾಂತರಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ KA 06 G 1079 ನಂಬರಿನ ಆಂಬುಲೆನ್ಸ್ ನಲ್ಲಿ ಕೈ ಕಳೆದುಕೊಂಡಿರುವ ಯುವಕ ರಾಜು ಜೊತೆಯಲ್ಲಿ ಬಸ್ ಅಪಘಾತದಲ್ಲಿ ಗಾಯಗೊಂಡ ಮತ್ತೋರ್ವ ರೋಗಿಯನ್ನು ಒಂದೇ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ನಮ್ಮ ಸರ್ಕಾರಕ್ಕೆ ಇಷ್ಟೊಂದು ದಾರಿದ್ರ್ಯವೇ ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ವರದಿ : ಮಾರುತಿ ಪ್ರಸಾದ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB