ತುಮಕೂರು : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತುಮಕೂರು ಮತ್ತು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ, ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಭಾರ ಪ್ರಾಂಶುಪಾಲರಾದ ಸಿ.ಸಿ. ಬಾರಕೇರ ಅವರ ವಯೋನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಹಾಗೂ ಬಿ.ವಿ.ಎ.–ಚಿತ್ರಕಲೆ ಪದವಿ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಡಾ.ಕರಿಯಣ್ಣ ಬಿ. ಹಿರಿಯ ಅಧ್ಯಾಪಕರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರು ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಸಿ.ಸಿ.ಬಾರಕೇರ ಅವರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಕಟ್ಟಿ–ಬೆಳೆಸಿದ ಗಟ್ಟಿಗರು, ಸಾಕಷ್ಟು ಏಳು–ಬೀಳುಗಳನ್ನು ಕಂಡಂತಹರು ಇಡೀ ತಮ್ಮ 37 ವರ್ಷಗಳ ಸುದೀರ್ಘ ಸೇವೆಯಲ್ಲಿ ಚಿತ್ರಕಲಾ ಕಾಲೇಜಿನ ಅಭಿವೃದ್ಧಿ, ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಅಚ್ಚು ಮೆಚ್ಚಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಚಿತ್ರಕಲಾ ಕಾಲೇಜು ಇಂದು ಉತ್ತಮ ಸ್ಥಿತಿಯಲ್ಲಿ ಮುನ್ನೆಡೆಯುತ್ತಿರುವುದಕ್ಕೆ ಸಿ.ಸಿ.ಬಾರಕೇರ ಅವರ ಬೆವರು ಹನಿ, ಶ್ರಮ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಎಲ್ಲ ಇಲ್ಲಗಳ ನಡುವೆ ಎಲ್ಲವನ್ನು ಸಾಧಿಸಿದ ಸಾಧಕರು ಇವರಾಗಿದ್ದಾರೆ. ಇವರ ಪ್ರಾಮಾಣಿಕತೆಯು ಈ ಕಾಲೇಜು ಬೆಳೆಯಲು ಸಹಕಾರಿಯಾಗಿದೆ. ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ವಿದ್ಯಾರ್ಥಿಗಳೊಂದಿಗಿನ ಉತ್ತಮ ಸಂಬಂಧ ಅವರ ವೃತ್ತಿ ಜೀವನಕ್ಕೆ ಮೆರಗು ತಂದಿದೆ. ದಕ್ಷಿಣ ಕರ್ನಾಟಕದ ಏಕೈಕ ಚಿತ್ರಕಲಾ ಕಾಲೇಜನ್ನು ಉಳಿಸಿ ಬೆಳೆಸಿದ ಕೀರ್ತಿ ಇವರದಾಗಿದೆ ಎಂದು ಆಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ತರನ್ನುಂ ನೀಖತ್ ಎಸ್. ರವರು ಮಾತನಾಡುತ್ತಾ, ಚಿತ್ರಕಲಾ ಕಾಲೇಜು ತಮ್ಮ ಅವಧಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಳಾಂತರಿಸಿದ ನೆನಪನ್ನು ಮಾಡಿಕೊಳ್ಳುತ್ತಾ, ತಮ್ಮ ಮತ್ತು ಚಿತ್ರಕಲಾ ಕಾಲೇಜಿನ ಉತ್ತಮ ಬಾಂದವ್ಯವಿತ್ತು. ಅದು ಹಾಗೆ ಮುಂದುವರೆದುಕೊಂಡು ಹೋಗಬೇಕು ಎಂದರು. ಚಿತ್ರಕಲೆಯ ಮೂಲಕ ನಮ್ಮ ಕಾಲೇಜಿಗೆ ತಾವು ಕಳೆಯನ್ನು ತಂದು ಕೊಟ್ಟಿದ್ದೀರಿ ಎಂದು ತಿಳಿಸಿದರು. ತಮ್ಮ ಅವಧಿಯಲ್ಲಿ ಸಾಕಷ್ಟು ಕೊರತೆಗಳಿದ್ದರೂ, ಸಹ ಚಿತ್ರಕಲಾ ವಿಭಾಗಕ್ಕೆ ಕೊಠಡಿಗಳನ್ನು ನೀಡುವುದರ ಮೂಲಕ ಅವರನ್ನು ನಮ್ಮ ಕಾಲೇಜಿನ ಸದಸ್ಯರಂತೆ ಪರಿಗಣಿಸುವ ಸೌಭಾಗ್ಯ ನಮ್ಮದಾಯಿತು ಮತ್ತು ಅದೇ ರೀತಿ ಸಿ.ಸಿ.ಬಾರಕೇರ ಅವರು ನಮ್ಮ ಕಾಲೇಜಿನ ಎಲ್ಲ ಕೆಲಸ ಕಾರ್ಯಗಳಲ್ಲಿ ತುಂಬಾ ಸಂತೋಷದಿಂದ ಭಾಗಿಯಾಗಿ ನಮ್ಮೊಳಗೊಬ್ಬರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿ.ಎಸ್.ಗ್ರಾಮ್ ಪುರೋಹಿತರವರು, ಸಿ.ಸಿ.ಬಾರಕೇರವರು ಚಿತ್ರಕಲಾ ಕಾಲೇಜಿನ್ನು ಒಂದು ಮಾದರಿ ಕಾಲೇಜನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಬಾರಕೇರ ರವರ ಪ್ರಯತ್ನ ಹೋರಾಟದಿಂದ ಈ ಕಾಲೇಜು ಬೆಳೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಬಾರಕೇರ ಅವರ ಸೇವೆಯು ಸಮಾಜಮುಖಿಯಾದುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ವಸಂತ ಟಿ.ಡಿ ಅವರು ಮಾತನಾಡಿ ಸಿ.ಸಿ. ಬಾರಕೇರ ರವರ ಶ್ರಮವು ಇಂದು ಚಿತ್ರಕಲಾ ಮಹಾವಿದ್ಯಾಲಯ ಬೆಳೆಯಲು ಸಹಕಾರಿಯಾಗಿದೆ. ಇವರು ಒಬ್ಬ ಉತ್ತಮ ಶಿಕ್ಷಕರಾಗಿ, ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆಯನ್ನು ಸ್ವೀಕರಿಸಿ ಮಾತನಾಡಿದ ಸಿ ಸಿ. ಬಾರಕೇರ ರವರು, ನಾನು ಚಿತ್ರಕಲಾ ಮಹಾವಿದ್ಯಾಲಯ ಉಳಿಸಿ–ಬೆಳೆಸಲು ಸಹಕಾರಿಯಾದ ಹಳೆ ವಿದ್ಯಾರ್ಥಿ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರುಗಳು, ಸಹೋದ್ಯೋಗಿ ಮಿತ್ರರು, ವಿದ್ಯಾರ್ಥಿಗಳು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಬಿ.ವಿ.ಎ. ಪದವಿ ವಿದ್ಯಾರ್ಥಿಗಳು ಚಿತ್ರಕಲಾ ಪ್ರದರ್ಶನದ ಮೂಲಕ ನನಗೆ ಗೌರವ ಸಲ್ಲಿಸಿರುವುದು ಅತೀವ ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕರ್ಣಂವಾಣಿಯವರು ಪ್ರಾರ್ಥನೆ ಸಲ್ಲಿಸಿದರು. ಪ್ರೊ.ಮಧುಶಾಲಿನಿ ರವರು ಸ್ವಾಗತಿಸಿದರು, ಪ್ರೊ. ಆಯಿಷಾ ಸಿದ್ದಿಖಾರವರು ವಂದಿಸಿದರು, ಡಾ. ಅಶ್ವಾಖ್ ಅಹಮದ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW