ಬೀದರ್: ಜಿಲ್ಲೆಯ ಸಾರ್ವಜನಿಕರು ಭಿಕ್ಷೆ ಬೇಡುತ್ತಿರುವುದು ಕಂಡು ಬಂದರೆ ಅವರಿಗೆ ಭಿಕ್ಷೆ ನೀಡಿ ಪ್ರೋತ್ಸಾಹಿಸದೇ ಅದನ್ನು ಬಹಿಷ್ಕರಿಸಿ, ಬೀದರ್ ಜಿಲ್ಲೆಯನ್ನು ಭಿಕ್ಷಾಟನೆ ಮುಕ್ತವಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿರುವವರು ಕಂಡು ಬಂದರೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿ ಅಥವಾ ಟೋಲ್ ಫ್ರೀ ಸಂಖ್ಯೆ 10581 ಮತ್ತು ಸಹಾಯವಾಣಿ ಸಂಖ್ಯೆ: 94823 00400 ಕರೆ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ನಡೆಯುವ ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ್ ಸಹಾಯವಾಣಿ 112ಗೆ ಅಥವಾ ಸಮೀಪದಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಪ್ರಕಾರ ಮೂರು ತಿಂಗಳು ಕಠಿಣ ಕಾರಗೃಹವಾಸ ಹಾಗೂ ದಂಡವನ್ನು ವಿಧಿಸಲಾಗುವುದು. ಅದೇ ರೀತಿ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿದ್ದಲ್ಲಿ ಬಾಲನ್ಯಾಯ ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2015 ಮತ್ತು ತಿದ್ದುಪಡಿ ಕಾಯ್ದೆ 2021ರ 76ರ ಪ್ರಕಾರ 5 ವರ್ಷ ಕಾರಾಗೃಹ ವಾಸ ಮತ್ತು 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು ಎಂದಿದ್ದಾರೆ.
ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗು. ಇದು ಬಡತನ, ನಿರುದ್ಯೋಗ, ಸಾಮಾಜಿಕ ಅಸಮಾನತೆಯಿಂದ ಉಂಟಾಗಿರುತ್ತದೆ. ಭಿಕ್ಷಾಟನೆಯು ವ್ಯಕ್ತಿಗಳ ಆತ್ಮ ಗೌರವವನ್ನು ಕುಗ್ಗಿಸುತ್ತದೆ. ಇದರಿಂದ ಸಮಾಜದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಭಿಕ್ಷಾಟನೆಯನ್ನು ತಡೆಗಟ್ಟಲು ಮತ್ತು ನಿರ್ಮೂಲನೆ ಮಾಡಲು ಸಾಮೂಹಿಕ ಪ್ರಯತ್ನ ಮತ್ತು ಪರಿಹಾರ ಕ್ರಮಗಳು ಅಗತ್ಯವಾಗಿವೆ. ಹಾಗಾಗಿ ಜಿಲ್ಲೆಯಲ್ಲಿ ಭಿಕ್ಷಾಟನೆಯನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆದು ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡಲು ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ.ಅದೇ ರೀತಿ ಸಾರ್ವಜನಿಕರು ಸಹ ಭಿಕ್ಷಾಟನೆ ಪ್ರೋತ್ಸಾಹಿಸದೆ ಇದನ್ನು ನಿರ್ಮೂಲನೆ ಮಾಡಲು ಭಿಕ್ಷಾಟನೆಯನ್ನು ಬಹಿಷ್ಕರಿಸಬೇಕು ಎಂದು ಅವರು ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC