ತುಮಕೂರು: ಬೆಳಧರ ಶಾಲೆಯ ಆವರಣದ ಒಳಗೆ ಅಕ್ರಮವಾಗಿ ವಾಹನ ಪಾರ್ಕಿಂಗ್ ಮಾಡುತ್ತಿರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದರೂ ಈವರೆಗೆ ಕ್ರಮಕೈಗೊಂಡಿಲ್ಲ, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಕಾಳಜಿ ಪೌಂಡೇಶನ್ (ರಿ) ತುಮಕೂರು ಹಾಗೂ ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.
ಶಾಲೆಯ ಆವರಣದೊಳಗೆ ಖಾಸಗಿ ವಾಹನಗಳ ಪ್ರವೇಶದಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಲಾ ಆವರಣಕ್ಕೆ ವಾಹನಗಳು ನುಗ್ಗುತ್ತಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಮೀಸಲಾಗಬೇಕಾದ ಶಾಲಾ ಮೈದಾನ ಖಾಸಗಿ ವಾಹನಗಳ ನಿಲುಗಡೆ ತಾಣವಾಗಿ ಬದಲಾಗಿದೆ. ವಾಹನ ನಿಲುಗಡೆ ಮಾಡದಂತೆ ಫಲಕಗಳನ್ನು ಹಾಕಲಾಗಿದ್ದರೂ, ಕ್ಯಾರೇ ಅನ್ನದೇ ವಾಹನಗಳನ್ನು ಶಾಲೆಯ ಆಟದ ಮೈದಾನದಲ್ಲಿ ಪಾರ್ಕ್ ಮಾಡಲಾಗುತ್ತಿದೆ. ವಾಹನಗಳ ಪಾರ್ಕಿಂಗ್ ಮಾಡಿದ ಬಳಿಕ ಉಳಿದ ಜಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಚಟುವಟಿಕೆ ನಡೆಸುವಂತಾಗಿದೆ ಇದರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.
ಈ ಬಗ್ಗೆ ಉಪ ಲೋಕಾಯುಕ್ತರು, ಪಿಡಿಓ ಮೌಖಿಕ ಸೂಚನೆ ನೀಡಿದ್ದರೂ, ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ತಕ್ಷಣವೇ ತುಮಕೂರು ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಕ್ರಮಕೈಗೊಳ್ಳುವಂತೆ ಕಾಳಜಿ ತಂಡ ಮತ್ತು ನೈಜ ಹೋರಾಟಗಾರರ ವೇದಿಕೆ ಹಾಗೂ ಮನವಿ ಸಲ್ಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx