ಅಮಾವಾಸ್ಯೆ ದಿನದಂದು ಮನೆಯವರನ್ನು ದೇವಸ್ಥಾನಕ್ಕೆ ಕಳುಹಿಸಿದ ನಂತರ, ಅದೇ ದಿನ ಮನೆಗೆ ತೆರಳಿ ನಗ-ನಾಣ್ಯ ದೋಚಿ ನಿಂಬೆ ಹಣ್ಣು ಇಟ್ಟು ಯಾರೋ ಮಾಟ ಮಾಡಿಸಿದ್ದಾರೆ ಎಂದು ಯಾಮಾರಿಸುತ್ತಿದ್ದ ಜ್ಯೋತಿಷಿ ವಿರುದ್ಧ ಇಲ್ಲಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಪೇಟೆಯ ಸುರೇಶ್ ಪಾಟೀಲ್ ಮೇಲೆ ಮನೆಯೊಡತಿ ಇಂದಿರಾ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪತಿ ಮತ್ತು ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ಮಹಿಳೆ ವಾಸವಾಗಿದ್ದು, ಜೀವನಕ್ಕಾಗಿ ಮನೆಕೆಲಸ ಮಾಡುತ್ತಿದ್ದರು. ಮಗಳಿಗೆ ಕುಣಿಗಲ್ ನ ಹೆಟ್ಟೂರು ನಿವಾಸಿ ಗೋವಿಂದ ಗೌಡ ಎಂಬವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತವರು ಮನೆಗೆ ಬರುತ್ತಿದ್ದ ಮಗಳ ಕುರಿತು ಇಂದಿರಾ ಚಿಂತಾಕ್ರಾಂತರಾಗಿದ್ದರು.
ಈ ಬಗ್ಗೆ ಇಂದಿರಾ ಕೂಡ ತನ್ನ ತಾಯಿಯೊಂದಿಗೆ ದುಃಖ ತೋಡಿಕೊಂಡಿದ್ದಳು. ಸಮಸ್ಯೆಗೆ ಪರಿಹಾರವೆಂಬಂತೆ ಆಕೆಯ ತಾಯಿಯು ತನಗೆ ಜ್ಯೋತಿಷಿ ಸುರೇಶ್ ಪಾಟೀಲ್ ಪರಿಚಯವಿದ್ದು, ಅವರ ಬಳಿ ವಿಚಾರಿಸು ಎಲ್ಲವೂ ಸರಿಹೋಗಲಿದೆ ಎಂದಿದ್ದಳು.
ಮನೆ ದೋಚಿ ನಿಂಬೆಹಣ್ಣು ಇಡುತ್ತಿದ್ದ ಜ್ಯೋತಿಷಿ: ಅದರಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮಹಿಳೆಯ ಮನೆಗೆ ಬಂದ ಜ್ಯೋತಿಷಿ ಎಲ್ಲವನ್ನೂ ಗಮನಿಸಿದ್ದಾನೆ. ನಿಮ್ಮ ಮಗಳ ಜೀವನ ಸರಿಪಡಿಸುತ್ತೇನೆ. ಅಮಾವಾಸ್ಯೆ ದಿನದಂದು ಮನೆಯಲ್ಲಿ ಯಾರೂ ಇರಬಾರದು. ಎಲ್ಲರೂ ದೇವಸ್ಥಾನಕ್ಕೆ ಹೋಗಿ ಎಂದು ಸೂಚಿಸಿದ್ದ. ಇದರಂತೆ ಇಂದಿರಾ ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳಿದ್ದರು. ಇದೇ ಸರಿಯಾದ ಸಮಯ ಅಂದುಕೊಂಡ ಆರೋಪಿ ಮನೆಗೆ ಬಂದು ಬೀರುವಿನಲ್ಲಿದ್ದ 5 ಲಕ್ಷ ರೂ ಬೆಲೆಯ ಚಿನ್ನಾಭರಣ ದೋಚಿದ್ದ. ಬಳಿಕ ಬಿರುವಿನಲ್ಲಿ ನಿಂಬೆ ಹಣ್ಣು ಇಟ್ಟು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


