ತುಮಕೂರು: ಅನುಸೂಚಿತ ಬುಡಕಟ್ಟು ಸಮುದಾಯದ ವಿರುದ್ಧ ಅವಮಾನಕಾರಿ, ಜಾತಿ ನಿಂದನೆ ಮಾಡಿದ ಮಾಜಿ ಸಂಸದ ರಮೇಶ್ ವಿಶ್ವನಾಥ ಕತ್ತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಶುಕ್ರವಾರ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಅನುಸೂಚಿತ ಬುಡಕಟ್ಟು ಸಮುದಾಯದ ವಿರುದ್ಧ ಜಾತಿ ನಿಂದನೆ ಮಾಡಿದ ರಮೇಶ್ ಕತ್ತಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಹೇಳಿದ ಮುಖಂಡರು, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ನಗರದ ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಜಿ. ಪುರುಷೋತ್ತಮ್ ಮಾತನಾಡಿ, ಮಾಜಿ ಸಂಸದ ರಮೇಶ್ ಕತ್ತಿಯವರು ಬೆಳಗಾವಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಅನುಸೂಚಿತ ಬುಡಕಟ್ಟು ಸಮುದಾಯವನ್ನು ಕೆಟ್ಟ ಪದಗಳಿಂದ ಅವಹೇಳಕಾರಿಯಾಗಿ ನಿಂದಿಸಿದ್ದರು. ಅವರ ವಿರುದ್ಧ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಮನವಿ ಮಾಡಿದರು.
ರಮೇಶ್ ಕತ್ತಿ ಬಳಸಿರುವ ಪದ ಅತ್ಯಂತ ನಿಂದನೀಯ, ಮಾನಹಾನಿಕಾರಕ, ಬುಡಕಟ್ಟು ಸಮುದಾಯದ ಗೌರವವನ್ನು ಕುಗ್ಗಿಸುವ ಉದ್ದೇಶದಿಂದಲೇ ಹೇಳಲಾಗಿದೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಈ ವೇಳೆ ಅಡಿಷನಲ್ ಎಸ್ಪಿಯವರಿಗೆ ಮನವಿ ಪತ್ರ ಸಲ್ಲಿಸಿ ವಿನಂತಿಸಿದರು.
ವಾಲ್ಮೀಕಿ ಸೇನೆ ರಾಜ್ಯಾಧ್ಯಕ್ಷ ಪ್ರತಾಪ್ ಮದಕರಿ ಮಾತನಾಡಿ, ಬೇಡ ಸಮುದಾಯದ ಬಗ್ಗೆ ರಮೇಶ್ ಕತ್ತಿಯ ಪದಬಳಕೆ ಸಹಿಸಲು ಸಾಧ್ಯವಿಲ್ಲ. ಈ ಸಮುದಾಯವನ್ನು ನಿಂದನೆ ಮಾಡುವ ಹಾಗೂ ಸಾಮಾಜಿಕ ವೈಷಮ್ಯ ಉಂಟು ಮಾಡುವ ಉದ್ದೇಶದಿಂದಲೇ ಅಂತಹ ಪದ ಬಳಸಿದ್ದಾರೆ. ಸಂವಿಧಾನಾತ್ಮಕವಾಗಿ ಸಮುದಾಯಕ್ಕೆ ದೊರೆತಿರುವ ಸಮಾನತೆ ಮತ್ತು ಮಾನವ ಗೌರವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಈ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು. ಕಾಯ್ದೆ ಪ್ರಕಾರ ತಕ್ಷಣ ಬಂಧನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುವುದಲ್ಲದೆ, ಎಲ್ಲಾ ಪೊಲೀಸ್ ಠಾಣೆಗಳಲ್ಲೂ ರಮೇಶ್ ಕತ್ತಿ ವಿರುದ್ಧ ದೂರು ದಾಖಲಿಸುವುದಾಗಿ ಪ್ರತಾಪ್ ಮದಕರಿ ಎಚ್ಚರಿಕೆ ನೀಡಿದರು.
ವಾಲ್ಮೀಕಿ ನಾಯಕ ನೌಕರರ ಸಂಘದ ಗೌರವಾಧ್ಯಕ್ಷ ಪಿ.ಬಿ.ಬಸವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ, ಮುಖಂಡರಾದ ಮೃತ್ಯುಂಜಯ, ದೊಡ್ಡಓಬಳಯ್ಯ, ಮುಳುಕುಂಟೆ ಅಶ್ವತ್ಥಯ್ಯ, ತಿಪ್ಪೇಸ್ವಾಮಿ, ರುದ್ರಪ್ಪ, ರಾಮಾಂಜಿನಿ, ಮುತ್ತುರಾಯಪ್ಪ, ಶ್ರೀರಂಗಯ್ಯ ಮೊದಲಾದವರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



