ಕೊರಟಗೆರೆ: ನಮ್ಮ ಹಳ್ಳಿಗಳು ಅಭಿವೃದ್ಧಿಯ ಜೊತೆಗೆ ಬದಲಾವಣೆಯಾಗಬೇಕಾದರೆ ದೇವತಾ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು, ಇಂತಹ ಹಬ್ಬಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಜಾತ್ಯಾತೀತವಾಗಿ ಆಚರಿಸಬೇಕು ಎಂದು ಎಲೆರಾಂಪುರ ನರಸಿಂಹಗಿರಿ ಸುಕ್ಷೇತ್ರ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾ.ಪಂ ವ್ಯಾಪ್ತಿಯ ಲಿಂಗಾಪುರದಲ್ಲಿ ಶ್ರೀಮಾರಮ್ಮ ದೇವಿ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ದೇವತೆ ಶ್ರೀಮಾರಮ್ಮ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಕಳೆದ ಎರಡು ದಿನಗಳಿಂದ ಶಾಸ್ತ್ರೋಕ್ತವಾಗಿ ಧಾರ್ಮಿಕ ಕಾರ್ಯಕ್ರಮ ನಡೆದಿದೆ, ಹೋಮ, ಹವನ, ವಿಶೇಷ ಪೂಜೆಯ ಮೂಲಕ ಮಾರಮ್ಮ ದೇವಿಗೆ ಶಕ್ತಿ ನೀಡಿದ್ದಾರೆ, ಪ್ರತಿಯೊಬ್ಬರು ಸ್ವಾರ್ಥಿಗಳಾಗಿ ಬದುಕದೇ ಈಶ ಸೇವೆ ದೇಶ ಸೇವೆ ಎಂಬಂತೆ ಭಾವನೆ ಇಟ್ಟುಕೊಂಡು ಸೇವಾ ಪುರಸ್ಕಾರಗಳು ಆಗಬೇಕು. ನಾವು ಹುಟ್ಟಿದ ಗ್ರಾಮ, ಬೆಳೆದಂತಹ ಸ್ಥಳ ಸ್ವರ್ಗಕ್ಕಿಂತಲೂ ಶ್ರೇಷ್ಠವಾದದ್ದು ಎಂದು ಹೇಳಿದರು.
ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಮಾಜಿ ಜಿಪಂ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ಅಣ್ಣನವರ ಸಹಕಾರದಿಂದ ಮಾರಮ್ಮ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಯಶಸ್ವಿ ಕಂಡಿದ್ದು, ೪೧ ದಿನದ ಮಂಡಲದ ಪೂಜೆಯನ್ನು ಊರಿನ ಗ್ರಾಮಸ್ಥರು ಹಬ್ಬದ ರೀತಿಯಲ್ಲಿ ಆಚರಿಸಬೇಕಿದೆ. ದಿನನಿತ್ಯ ಪೂಜೆ ಸಲ್ಲಿಸುವಂತೆ ಕೋರಿದರು.
ದೇವರಾಯನದುರ್ಗ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಪ್ರಧಾನ ಅರ್ಚಕ ಮೋಹನ್ ಭಟ್ಟರ್ ಮಾತನಾಡಿ, ಮಾರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಗಂಗಾಪೂಜೆ, ಹೋಮ, ಅಭಿಷೇಕ, ಆರಾಧನೆ ಈಗೇ ಹಲವು ಧಾರ್ಮಿಕ ಕಾರ್ಯಕ್ರಮದ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗಿದೆ, ಮಾರಮ್ಮ ದೇವಿಯ ಅನುಗ್ರಹ ಲಿಂಗಾಪುರ ಗ್ರಾಮಸ್ಥರ ಮೇಲೆ ಸದಾ ಇರಲಿ ಎಂದು ಆಶೀರ್ವಾದಿಸಿದರು.
ಈ ವೇಳೆ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಅರ್ಚಕರಾದ ರಂಗನಾಥ್ ಭಟ್ಟರ್, ಗೋಕುಲ್ ಭಟ್ಟರ್, ಆನಂದ್ ಭಟ್ಟರ್, ಮಾರಮ್ಮ ದೇವಸ್ಥಾನದ ಅರ್ಚಕ ಆನಂದ್, ಮಾವತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ನರಸಿಂಹಮೂರ್ತಿ (ಮೈಸೂರಪ್ಪ), ವಿಎಸ್‌ಎಸ್‌ಎನ್ ಸದಸ್ಯ ಓಬಳಯ್ಯ, ರಾಜಣ್ಣ (ಸಣ್ಣಪ್ಪ), ಸುನೀಲ್, ಹನುಮಂತರಾಯಪ್ಪ,ಗಂಟಿಗಾನಹಳ್ಳಿ ಹನುಮಂತರಾಯಪ್ಪ, ರಾಮಯ್ಯ ಹನುಮಂತಪ್ಪ, ಕಾಂತರಾಜು ಭೀಮಯ್ಯ, ತೊಳಸಮ್ಮ, ಕಾಂತರಾಜು, ನಾಗೇಶ್ ಊರಿನ ಗ್ರಾಮಸ್ಥರು ಹಾಜರಿದ್ದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸೊಬಗು
ಮಾರಮ್ಮ ದೇವಿಯ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಗಂಗಾ ಪೂಜೆ, ಗಣಪತಿ ಪೂಜೆ, ಮಹಾ ಕುಂಭರಾದನೆ, ಸುಕೃತ್ ಪೂರ್ಣಾಹುತಿ, ಪ್ರಾಣ ಪ್ರತಿಷ್ಠೆ ಹೋಮ, ನೇತ್ರೋನ್ಮಿಲನ ಹೋಮ, ದುರ್ಗಾ ಹೋಮ, ಮಹಾ ಪೂರ್ಣಾಹುತಿ ಕಳಶ ಉದ್ವಾಸನೆ, ಮೀನ ಲಗ್ನದಲ್ಲಿ ಪ್ರಾಣ ಪ್ರತಿಷ್ಠೆ, ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಕಾರ್ಯಕ್ರಮವು ಯಶಸ್ವಿಕಂಡಿದ್ದು, ಗ್ರಾಮದ ಹೆಣ್ಣು ಮಕ್ಕಳು ಸಾಂಸ್ಕೃತಿಕ ಉಡುಗೆ ತೊಟ್ಟು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


