ಕಾರವಾರ: ಗೋವಾ ಮತ್ತು ಕಾರವಾರವನ್ನು ಸಂಪರ್ಕಿಸುವ ಕಾಳಿ ನದಿಯ ಮೇಲಿನ ಸೇತುವೆ, ಬುಧವಾರ ರಾತ್ರಿ 1:50 ರ ಸುಮಾರಿಗೆ ಕುಸಿದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸೇತುವೆ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಕಾಳಿನದಿಯ ಸೇತುವೆ ಕುಸಿತಕ್ಕೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಅಧ್ವಾನ ನಡೆದರೂ ಅವರು (ಕೇಂದ್ರ ಸರ್ಕಾರ) ಮೌನವಾಗಿರುವುದು ಅಚ್ಚರಿ ಮೂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಯೋಜನೆ ಕೇಂದ್ರ ಸರ್ಕಾರಕ್ಕೆ ಸೇರಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐ.ಆರ್.ಬಿ ಕಂಪನಿ ಮೇಲೆ ಕೇಂದ್ರದ ಹಿಡಿತವಿದೆ. ಕಂಪನಿ ಈವರೆಗೆ ಹಲವು ಅವೈಜ್ಞಾನಿಕ ಕೆಲಸ ಮಾಡಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು.
ಕಾಳಿ ನದಿಗೆ ಹೊಸ ಸೇತುವೆ ನಿರ್ಮಿಸುವ ವೇಳೆ ಹಳೆಯ ಸೇತುವೆ ಮೇಲೆ ಭಾರದ ಯಂತ್ರೋಪಕರಣ ಇಟ್ಟು ಕೆಲಸ ಮಾಡಿದ್ದರು. ಅಂಕೋಲಾದ ಹಟ್ಟಿಕೇರಿಯಲ್ಲೂ ಅಂತಹ ಕೆಲಸ ನಡೆದಿತ್ತು. ಅದರಿಂದ ಕಳೆದ ವರ್ಷ ಅಲ್ಲಿನ ಸೇತುವೆ ಕುಸಿದಿತ್ತು. ಹಳೆಯ ಸೇತುವೆಯ ಸಾಮರ್ಥ್ಯ ಪರೀಕ್ಷಿಸದೆ ವಾಹನಗಳ ಓಡಾಟಕ್ಕೆ ಅನುಮತಿಸಲಾಗಿತ್ತು. ಎಲ್ಲದರ ಹಿಂದೆ ಐ.ಆರ್.ಬಿ ಕಂಪನಿ ನಿರ್ಲಕ್ಷತನವಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296