ತುಮಕೂರು: ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆಗಾಗಿ ಶಿರಾ ತಾಲ್ಲೂಕು ಹೊನ್ನಗೊಂಡನಹಳ್ಳಿ ಹಾಗೂ ಭುವನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಮಟ್ಟದ ಪರಿಶೀಲನಾ ಸದಸ್ಯರ ತಂಡ (NLM) ಇಂದು ಭೇಟಿ ನೀಡಿ ಫಲಾನುಭವಿಗಳ ಜೊತೆ ಚರ್ಚೆ ನಡೆಸಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿತು.
ದಯಾಕರ್ ರೆಡ್ಡಿ ಮತ್ತು ತಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡಿರುವ 5 ಕಾಮಗಾರಿಗಳನ್ನು ಪರಿಶೀಲನೆ ನಡೆಸಿತು. ತದನಂತರ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ 5 ಫಲಾನುಭವಿಗಳನ್ನು ಭೇಟಿ ಮಾಡಿ ನರೇಗಾ ಸೌಲಭ್ಯಗಳನ್ನು ಪಡೆದಿರುವ, ಯೋಜನೆಯ ಸದುಪಯೋಗದ ಬಗ್ಗೆ ಮಾಹಿತಿ ಕಲೆ ಹಾಕಿತು.
ಸಂಜೀವಿನಿ ಒಕ್ಕೂಟದ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಂಘದ ಕಾರ್ಯಕ್ರಮಗಳ ಸದ್ಬಳಕೆ ಕುರಿತು ಮಾಹಿತಿ ಪಡೆಯಿತು. ನಂತರ ಸ್ವಸಹಾಯ ಸಂಘಗಳ ಲಾಭದಾಯಕ ಚಟುವಟಿಕೆಗಳ ಬಗ್ಗೆ ಫಲಾನುಭವಿಗಳಿಗೆ ಮಾರ್ಗದರ್ಶನ ನೀಡಿತು.
PMAY(G) ಯೋಜನೆಯಡಿ ಪ್ರಗತಿಯಲ್ಲಿರುವ ಹಾಗೂ ಮುಕ್ತಾಯಗೊಂಡಿರುವ ವಸತಿ ಯೋಜನೆಯ 5 ಫಲಾನುಭವಿಗಳನ್ನು ಭೇಟಿ ಮಾಡಿ ವಸತಿಗಳನ್ನು ಅನುಷ್ಟಾನ ಮಾಡಿಕೊಂಡಿರುವ ಬಗ್ಗೆ ಖಚಿತ ಪಡಿಸಿಕೊಂಡಿತು. ಇದೇ ವೇಳೆ ಫಲಾನುಭವಿಗಳೊಂದಿಗೆ ಚರ್ಚಿಸಿ ಯೋಜನೆಯಿಂದ ಪಡೆದುಕೊಂಡಿರುವ ಅನುಕೂಲತೆಯ ಬಗ್ಗೆ ಮಾಹಿತಿ ಪಡೆಯಿತು. ರಾಷ್ಟ್ರೀಯ ಪಿಂಚಣಿ ಯೋಜನೆಗಳಾದ NOAPS, NWPS, NDPSನ ಪ್ರತಿ ಯೋಜನೆಯ 5 ಫಲಾನುಭವಿಗಳೊಂದಿಗೆ ಚರ್ಚಿಸಿ ಸಮರ್ಪಕವಾಗಿ ಪಿಂಚಣಿ ಬರುವ ಬಗ್ಗೆ ಮಾಹಿತಿ ಪಡೆಯಿತು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಮಹೇಶ, ಆರ್.ಪ್ರಭಾವತಿ, ವಸತಿ ಯೋಜನೆಯ ತಾಲ್ಲೂಕು ನೋಡಲ್ ಅಧಿಕಾರಿಗಳಾದ ಕುಮಾರ್ ನಾಯಕ್, ನಾರಾಯಣ್, ಸಂಜೀವಿನಿ ಒಕ್ಕೂಟದ ತಾಲ್ಲೂಕು ಸಂಯೋಜಕರಾದ ಮಂಜುನಾಥ್, ನರೇಗಾ ಯೋಜನೆಯ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಗ್ರಾ.ಪಂ.ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296