ತುಮಕೂರು: ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಹೆಚ್ಚುವರಿ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಮತ್ತು ತಂಡ ಭೇಟಿ ನೀಡಿ, ತಾಲ್ಲೂಕಿನಲ್ಲಿ ಅನುಷ್ಠಾನಗೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಮೇಲ್ವಿಚಾರಣೆ ನಡೆಸಿದರು.
ಕೇಂದ್ರ ತಂಡವು ಕೊರಟಗೆರೆ ತಾಲ್ಲೂಕು ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 17.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಎನ್ಆರ್ಎಲ್ಎಂ ಸಂಜೀವಿನಿ ಘಟಕಕ್ಕೆ ಭೇಟಿ ನೀಡಿ, ಘಟಕವನ್ನು ವೀಕ್ಷಿಸಿದರು.
ನಂತರ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 48 ಮಹಿಳಾ ಸ್ವಸಹಾಯ ಸಂಘಗಳ ಸುಮಾರು 450ಕ್ಕೂ ಅಧಿಕ ಸದಸ್ಯರು ಎನ್ಆರ್ಎಲ್ಎಂ ಸಂಜೀವಿನಿ ಯೋಜನೆಯಡಿ ಈವರೆಗೆ 45 ಲಕ್ಷ ರೂ.ಗಳ ಸಾಲ ಸೌಲಭ್ಯ ಪಡೆದು, 1.27 ಕೋಟಿ ರೂ.ಗಳ ವಹಿವಾಟು ನಡೆಸಿರುವ ಬಗ್ಗೆ ಶ್ರೀ ಕಾವೇರಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷರು, ಸದಸ್ಯರು ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಸಂವಾದ ನಡೆಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಲಕ್ಷ್ಮೀ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಸಿದ್ಧಪಡಿಸಿದ ಹಪ್ಪಳ, ಮಸಾಲ ಪದಾರ್ಥಗಳು, ವಿವಿಧ ಬಗೆಯ ಚಟ್ನಿಪುಡಿ ಹಾಗೂ ಸಿರಿಧಾನ್ಯ ಮಾಲ್ಟ್ಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವೀಕ್ಷಿಸಿದರು. ಇದೇ ವೇಳೆ ಶ್ರೀ ಲಕ್ಷ್ಮೀ ಸ್ತ್ರಿಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಯೋಜನೆಯಡಿ ಸಬ್ಸಿಡಿ ದರದಲ್ಲಿ ಹಪ್ಪಳ ತಯಾರಿಕಾ ಯಂತ್ರವನ್ನು ಖರೀದಿಸಿದ್ದು, ಯಂತ್ರದ ಮೂಲಕ ಹಪ್ಪಳ ತಯಾರಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಬಳಿಕ ಇರಕಸಂದ್ರ ಕಾಲೋನಿ ವೃತ್ತದಲ್ಲಿ ಏರ್ಪಡಿಸಿದ್ದ ಮಾಸಿಕ ಸಂತೆ ಮೇಳಕ್ಕೆ ಭೇಟಿ ನೀಡಿದ ಕೇಂದ್ರ ತಂಡವು ಕೊರಟಗೆರೆ ತಾಲ್ಲೂಕಿನ ಎನ್ ಆರ್ ಎಲ್ ಎಂ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವೀಕ್ಷಿಸಿದರು. ಸ್ವಸಹಾಯ ಸಂಘದ ಸದಸ್ಯರು ತಯಾರಿಸುವ ಎಲ್ಲಾ ಉತ್ಪನ್ನಗಳಿಗೂ ಏಕರೂಪದ ಬ್ರಾಂಡಿಂಗ್ ಮಾಡಿಸಿ ವ್ಯಾಪಾರ ವಹಿವಾಟು ನಡೆಸುವಂತೆ ಜಿಪಿಎಲ್ಎಫ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸೂಚಿಸಿದರು.
ಆ ನಂತರ ಇರಕಸಂದ್ರ ಕಾಲೋನಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 9.40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಭೋಜನಾಲಯ ಹಾಗೂ 5.20 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಬಾಸ್ಕೆಟ್ಬಾಲ್ ಅಂಕಣ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತ ಪವನ್ಕುಮಾರ್ ಮಾಲಪಾಟಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ದಿಡ್ಡಿಮನಿ, ಎನ್ಆರ್ಎಲ್ಎಂ ವ್ಯವಸ್ಥಾಪಕ ನಿರ್ದೇಶಕ ಶ್ರೀವಿದ್ಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು.ಜಿ, ಉಪ ಕಾರ್ಯದರ್ಶಿ(ಅಭಿವೃದ್ಧಿ) ಸಂಜೀವಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ.ಅನಂತರಾಮು, ತಹಶೀಲ್ದಾರ್ ಮಂಜುನಾಥ್, ಸಹಾಯಕ ನಿರ್ದೇಶಕ(ಗ್ರಾ.ಉ.) ಗುರುಮೂರ್ತಿ, ತಾಲ್ಲೂಕು ಯೋಜನಾಧಿಕಾರಿ ಮಧುಸೂದನ್, ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾರ್ವತಮ್ಮ, ಉಪಾಧ್ಯಕ್ಷ ರಮ್ಯ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ನರೇಗಾ ತಾಲ್ಲೂಕು ತಾಂತ್ರಿಕ ಸಂಯೋಜಕ ಮಧು, ತಾಂತ್ರಿಕ ಸಹಾಯಕ ದಿಲೀಪ್, ಪಿಡಿಒ ಮಂಜುಳ, ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296