ತುಮಕೂರು: ಬದುಕಿನಲ್ಲಿ ಎದುರಾಗುವ ಕಷ್ಟ–ನೋವುಗಳು ಸಹಜ ಪ್ರಕ್ರಿಯೆ. ಅವುಗಳಿಗೆ ಕುಗ್ಗದೆ, ಎದುರಾಗುವ ಸವಾಲುಗಳನ್ನು ಮೀರಿ ಸಾಧನೆಯತ್ತ ಸಾಗಬೇಕು ಎಂದು ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ದೀಪಿಕಾ ಟಿ.ಸಿ. ಕಿವಿಮಾತು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ವಿಜ್ಞಾನ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಯೋಗ ಮತ್ತು ಮಹಿಳಾ ಸಬಲೀಕರಣ’ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಜೀವನದ ಕಹಿ ಘಟನೆಗಳನ್ನು ಸ್ಮರಿಸಿದ ದೀಪಿಕಾ, “ಒಂದು ಹೊತ್ತಿನ ಊಟಕ್ಕೂ ಪರದಾಡಿದ ದಿನಗಳನ್ನು ಕಂಡಿದ್ದೇನೆ. ಆದರೆ ಯಾವುದೇ ಸವಾಲುಗಳು ನಮ್ಮ ಸಾಧನೆಯ ಹಾದಿಗೆ ಅಡ್ಡಿಯಾಗಬಾರದು,” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಗ ತರಬೇತುದಾರರಾದ ಎಸ್.ಪಿ. ನಂದಿನಿ ಮಾತನಾಡಿ, “ಯೋಗವು ಕೇವಲ ಒಂದು ಫ್ಯಾಷನ್ ಅಥವಾ ಸ್ಪರ್ಧೆಯಲ್ಲ. ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಮಾನಸಿಕ ಸ್ಥಿರತೆ, ಏಕಾಗ್ರತೆ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಯೋಗ ಪೂರಕವಾಗಿದೆ,” ಎಂದರು.
ಇದೇ ಸಂದರ್ಭದಲ್ಲಿ ಸಾಧಕಿಯರಾದ ದೀಪಿಕಾ ಟಿ.ಸಿ. ಮತ್ತು ಎಸ್.ಪಿ. ನಂದಿನಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿ.ವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಶ್ರೀನಿವಾಸ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎ.ಎಂ. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


