ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುವ ಶೂ ಮತ್ತು ಸಾಕ್ಸ್ ವಿತರಣೆಯಲ್ಲಿ ಆಗುವ ವಿಳಂಬವನ್ನು ತಪ್ಪಿಸಲು ರಾಜ್ಯ ಸರ್ಕಾರ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. 2026-27ನೇ ಶೈಕ್ಷಣಿಕ ಸಾಲಿಗಾಗಿ ವಿದ್ಯಾರ್ಥಿಗಳ ಮಾಹಿತಿ (Indent) ಸಂಗ್ರಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.
ಮಾಹಿತಿ ಸಂಗ್ರಹ: 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ನಿಖರ ಅಂಕಿಅಂಶಗಳನ್ನು ಒದಗಿಸುವಂತೆ ಎಲ್ಲ ಜಿಲ್ಲೆಗಳ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ (DDPI) ಇಲಾಖೆಯು ಅಧಿಕೃತ ಸುತ್ತೋಲೆ ಹೊರಡಿಸಿದೆ.
ಶೂ ಬದಲು ಚಪ್ಪಲಿ?: ಈ ಬಾರಿ ಸರ್ಕಾರ ಒಂದು ಮಹತ್ವದ ಬದಲಾವಣೆಗೆ ಚಿಂತನೆ ನಡೆಸಿದೆ. ಕೆಲವು ಜಿಲ್ಲೆಗಳಲ್ಲಿ ಶೂ ಮತ್ತು ಸಾಕ್ಸ್ ಬದಲಿಗೆ ‘ಚಪ್ಪಲಿ’ ವಿತರಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ.
ಸ್ಥಳೀಯ ಆಯ್ಕೆಗೆ ಅವಕಾಶ: ಶಾಲೆಯು ಇರುವ ಪ್ರದೇಶದ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಶೂ ಬೇಕೋ ಅಥವಾ ಚಪ್ಪಲಿ ಬೇಕೋ ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಹಾಗೂ ಶಾಲಾ ಮುಖ್ಯಸ್ಥರಿಗೆ ನೀಡಲಾಗಿದೆ.
ವಿಳಂಬಕ್ಕೆ ಬ್ರೇಕ್: ಶೈಕ್ಷಣಿಕ ವರ್ಷ ಆರಂಭವಾದರೂ ಮಕ್ಕಳಿಗೆ ಶೂ ತಲುಪುವುದು ತಡವಾಗುತ್ತಿತ್ತು. ಈ ಬಾರಿ ಮುಂಚಿತವಾಗಿಯೇ ದತ್ತಾಂಶ ಸಂಗ್ರಹಿಸಿ, ಸ್ಥಳೀಯ ಮಟ್ಟದಲ್ಲಿ ಖರೀದಿ ಪ್ರಕ್ರಿಯೆಗೆ ಹಣ ಬಿಡುಗಡೆ ಮಾಡಲು ಇಲಾಖೆ ನಿರ್ಧರಿಸಿದೆ.
ಹವಾಮಾನಕ್ಕೆ ಅನುಗುಣವಾಗಿ ಮಕ್ಕಳಿಗೆ ಯಾವುದು ಹೆಚ್ಚು ಅನುಕೂಲಕರ ಎಂಬ ಮಾಹಿತಿ ನೀಡುವಂತೆ ಡಿಡಿಪಿಐಗಳಿಗೆ ಸೂಚಿಸಲಾಗಿದ್ದು, ಈ ಬಾರಿ ಶೂ ಬದಲಿಗೆ ಹೆಚ್ಚಿನ ಕಡೆ ಚಪ್ಪಲಿಗಳು ಕಾಣಿಸಿಕೊಂಡರೂ ಅಚ್ಚರಿಯಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


