ಶ್ರವಣಬೆಳಗೊಳ: ಶ್ರೀಕ್ಷೇತ್ರದ ಪರಮಪೂಜ್ಯ ಜಗದ್ಗುರು ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಪಟ್ಟಾಭಿಷಕ್ತರಾಗಿ ಎರಡು ವಸಂತ ಸಂದಿದೆ. ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ನವದೆಹಲಿ ಪುರಪ್ರವೇಶ ಮಾಡಿದರು.
ಶ್ರೀಗಳ ಆಗಮನ ಹಿನ್ನೆಲೆಯಲ್ಲಿಅವರನ್ನು ಭವ್ಯ ಹಾಗೂ ಭಕ್ತಿಪೂರ್ವಕ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ತರುವಾಯ ದೇಶದ ಅತಿದೊಡ್ಡ ಬ್ರಹ್ಮಕಮಲ ಆಡಿಟೋರಿಯಂನ ಯಶೋಭೂಮಿ ಕನ್ವೆಷನ್ಹಾಲ್ ನಲ್ಲಿ ಮಹಾಸ್ವಾಮೀಜಿ ಅವರ ಅದ್ಧೂರಿ ಹಾಗೂ ಭಕ್ತಿಪೂರ್ವಕ ಸ್ವಾಗತ ಸಮಾರಂಭವನ್ನು ಆಯೋಜಿಸಿ ಅಪಾರ ಮಂದಿ ಸೇರಿ ಅಭಿನಂದಿಸಿ ಸತ್ಕರಿಸಿದರು.
ಸ್ವಾಮೀಜಿ ಅವರು ಪ್ರಪ್ರಥಮವಾಗಿ ದೆಹಲಿಗೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಅವರು, ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಮೊದಲಾದವರು ಸೇರಿ ಪೂಜ್ಯಶ್ರೀ ಸ್ವಾಮೀಜಿ ಅವರನ್ನು ವಿನಮ್ರವಾಗಿ ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ದೆಹಲಿಯ ಮೂವರು ಸಂಸದರು, ಶಾಸಕರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಗೆಯೇ ದೆಹಲಿಯ ಅನೇಕ ಸಮಾಜ, ಸಮುದಾಯಗಳ ಪ್ರಮುಖರು, ಉದ್ಯಮಿಗಳು, ಅಧಿಕಾರಿಗಳು ಹಾಗೂ ದೆಹಲಿಯಲ್ಲಿ ನೆಲೆಸಿರುವ ಮೂರು ಸಾವಿರಕ್ಕೂ ಹೆಚ್ಚು ಶ್ರವಣಬೆಳಗೊಳದ ಭಕ್ತ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶ್ರೀಗಳನ್ನು ಕಂಡು ಸಂತಸಗೊಂಡರು.
ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ದೇಶದ ರಾಜಧಾನಿಗೆ ಇದೇ ಮೊದಲ ಬಾರಿಗೆ ಭೇಟಿ ಕೊಟ್ಟಿದ್ದು ಅತೀವ ಸಂತಸ ಸಂದಿದೆ. ಅದರಲ್ಲೂ ನೀವೆಲ್ಲರೂ ಸೇರಿ ಸತ್ಕರಿಸಿದ್ದು ಅವಿಸ್ಮರಣೀಯ ಕ್ಷಣ. ಶ್ರೀಕ್ಷೇತ್ರದ ಸಾವಿರಾರು ಮಂದಿ ಇಲ್ಲಿ ನೆಲೆಸಿರುವುದು ಮತ್ತೊಂದು ಸಂತಸ ಉಂಟು ಮಾಡಿದೆ ಎಂದು ನುಡಿದರು. ಒಟ್ಟಿನಲ್ಲಿ ಶ್ರೀಗಳು ಪ್ರಥಮ ಬಾರಿಗೆ ದೆಹಲಿಯ ಪುರಪ್ರವೇಶ ಹಾಗೂ ಸ್ವಾಗತ ಸಮಾರಂಭ ಅರ್ಥಪೂರ್ಣ ಹಾಗೂ ಅದ್ಧೂರಿಯಿಂದ ನೆರವೇರಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4