ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಲಕ್ಷೋಪ ಲಕ್ಷ ಭಕ್ತರ ಸಾಕ್ಷಿಯಾಗಿ ಬೆಳಗಾವಿಯ ಐತಿಹಾಸಿಕ ರಾಜಹಂಸಗಡ ಕೋಟೆಯ ಮೇಲೆ ಭಾನುವಾರ ಬೆಳಗ್ಗೆ ರಾಷ್ಟ್ರದಲ್ಲೇ ಅತ್ಯಂತ ಭವ್ಯವಾದದ್ದೆನ್ನಲಾದ, ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಅತ್ಯಂತ ಶಾಸ್ತ್ರೋಕ್ತ ವಿಧಿ ವಿಧಾನಗಳ ಮಧ್ಯೆ, ಮಹಾರಾಜರ ಪಟ್ಟಾಭಿಷೇಕದ ಮಾದರಿಯಲ್ಲಿ ಲೋಕಾರ್ಪಣಗೊಳಿಸಲಾಯಿತು.
ಸಾಂಪ್ರದಾಯಿಕ ಪಲ್ಲಕ್ಕಿ ಉತ್ಸವದೊಂದಿಗೆ ಗಣ್ಯರ ಮೆರವಣಿಗೆಯಲ್ಲಿ ಆಗಮಿಸಿ, ರಾಜಹಂಸಗಡದ ಅಧಿಪತಿ ಸಿದ್ಧೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ ಮತ್ತು ಗಣ್ಯರು ಪುತ್ಳಳಿಯನ್ನು ಅನಾವರಣಗೊಳಿಸಿದರು.
ಕೇಸರಿ ಬಟ್ಟೆ ನಿಧಾನವಾಗಿ ಕೆಳಗೆ ಸರಿಯುತ್ತಿದ್ದಂತೆ ಯುವರಾಜರ ಶಿಷ್ಯರು ಮಂತ್ರಘೋಷ ಮೊಳಗಿಸಿದರು. ಶಿವಾಜಿ ಮೂರ್ತಿ ಅನಾವರಣಗೊಳ್ಳುತ್ತಿದ್ದಂತೆ ಸೇರಿದ್ದ ಲಕ್ಷ ಲಕ್ಷ ಶಿವಾಜಿ ಭಕ್ತರು ಜೈ ಘೋಷ ಮೊಳಗಿಸಿದರು. ಇದೇ ಸಮಯಕ್ಕೆ ಬಣ್ಣದ ಓಕುಳಿಯಾಯಿತು.
ಅಲ್ಲಿನ ಇಡೀ ಪರಿಸರವೇ ಶಿವಭಕ್ತಿಯಲ್ಲಿ ಮಿಂದೆದ್ದಿತು. ಇಡೀ ಕಾರ್ಯಕ್ರಮ ಮಹಾರಾಜರ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯುತ್ತಿದೆಯೇನೋ ಎನ್ನುವ ರೀತಿಯಲ್ಲಿ, ರಾಜ ದರ್ಭಾರದಂತೆ ಭಾಸವಾಗುವಂತಿತ್ತು. ಇದೇ ವೇಳೆ ಸಾಂಪ್ರದಾಯಿಕ ಡೋಲ್ ತಾಶಾ ನೃತ್ಯ ಕೂಡ ನಡೆಯಿತು.
ಐತಿಹಾಸಿಕ ಸಿನೇಮಾಗಳಲ್ಲಿ ಕಾಣಬಹುದಾದ ರೀತಿಯಲ್ಲಿ ರಾಜದರ್ಭಾರ, ಪಟ್ಟಾಭಿಷೇಕಗಳ ಮಾದರಿಯಲ್ಲಿ ಇಡೀ ಕಾರ್ಯಕ್ರಮ ನಡೆದು ನ ಭೂತೋ ನ ಭವಿಷ್ಯತಿ ಎನ್ನುವಂತೆ ಭಾಸವಾಯಿತು.
ಇದಕ್ಕೂ ಮೊದಲು ಗಣ್ಯರು 60 ಅಡಿ ಧ್ವಜ ಸ್ಥಂಭದ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದರು. ಸೇರಿದ್ದವರೆಲ್ಲ ಎದ್ದು ನಿಂತು ರಾಷ್ಟ್ರಗೀತೆ ಹಾಡಿದರು. ಬಿರು ಬಿಸಿಲೆನ್ನದೆ ಲಕ್ಷಾಂತರ ಜನರು ಇಡೀ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರಾಜಹಂಸಗಡ ಕೋಟೆಯ ಮೇಲೆ ಜನರು ಕಿಕ್ಕಿರಿದು ಸೋರಿದ್ದಲ್ಲದೆ, ಸುಮಾರು 3 ಕಿಮೀ ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರವೇ ತುಂಬಿಹೋಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಯುವರಾಜ ಸಂಭಾಜಿರಾಜೇ ಛತ್ರಪತಿ, ಶಿವಾಜಿ ಯಾವುದೇ ಒಂದು ಭಾಗಕ್ಕೆ ಸೀಮಿತರಾದವರಲ್ಲ. ಅವರ ಆಚಾರ, ವಿಚಾರಗಳು ಇಡೀ ವಿಶ್ವಕ್ಕೇ ಆದರ್ಶ. ಸಂಪೂರ್ಣ ಜಗತ್ತಿನ ಆಸ್ತಿ ಅವರು. ಪ್ರಾಂತ, ಭಾಷೆಗಳನ್ನು ಮೀರಿದವರು. ಸಂಭಾಜಿಯ ಕಾಲಾನಂತರವೂ 9 ವರ್ಷಗಳ ಕಾಲ ತಮಿಳುನಾಡಿನ ಜಿಂಜೂ ಪ್ರಾಂತದಲ್ಲಿ ಶಿವಾಜಿ ಸಾಮ್ರಾಜ್ಯ ಮುಂದುವರಿದಿದ್ದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯನಲ್ಲ. ಶಿವಾಜಿ ಮಹಾರಾಜರ ವಂಶದಲ್ಲಿ ಹುಟ್ಟಿದ್ದೇ ನನ್ನ ಪುಣ್ಯ.ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಇಲ್ಲಿ ಅತ್ಯಂತ ಪರಿಶ್ರಮಪಟ್ಟು ಈ ಮೂರ್ತಿಯನ್ನು ಸ್ಥಾಪನೆ ಮಾಡಿದ್ದಾರೆ.
ನಾನು ಬೇರೆ ಕಾರ್ಯಕ್ರಮಗಳನ್ನು ಬಿಟ್ಟು ಇದರ ಉದ್ಘಾಟನೆಗೆ ಆಗಮಿಸಿದ್ದು ಈ ಮೂರ್ತಿಯನ್ನು, ಇಲ್ಲಿ ಸೇರಿರುವ ನಿಮ್ಮನ್ನೆಲ್ಲ ನೋಡಿದ ಮೇಲೆ ಸಾರ್ಥಕವೆನಿಸಿದೆ. ಇದು ನನ್ನ ಕರ್ತವ್ಯಕೂಡ ಹೌದು ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


