ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘದ ವತಿಯಿಂದ ನಡೆದ ಎಂಟನೇ ಅಂತರರಾಷ್ಟ್ರೀಯ ವಸ್ತು ಪ್ರದರ್ಶನದ ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹಿರಿಯ ಛಾಯಾಗ್ರಹಕರಾದ ಹಿರಿಯೂರಿನ ಸೂರ್ಯೋದಯ ಸ್ಟುಡಿಯೋ ಮಾಲಿಕರು ಹಾಗೂ ಛಾಯಾಗ್ರಾಹಕರಾದ ಹೆಚ್.ಆರ್. ಅಬ್ದುಲ್ ಅಜೀಜ್ ಹಾಗೂ ಪಾರ್ಥಸಾರಥಿ, ಗೌಸ್ ಪೀರ್ ಮತ್ತು ರಾಮಕೃಷ್ಣಪ್ಪ ಅವರ ಸೇವಾ ಮನೋಭಾವವನ್ನು ಗುರುತಿಸಿ “ಪೋಟೋ ಗ್ರಾಫಿ ಎಕ್ಸಲೆನ್ಸಿ ಅವಾರ್ಡ್” ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೆಚ್. ಆರ್ .ಅಬ್ದುಲ್ ಅಜೀಜ್, ಇವತ್ತು ಛಾಯಾಗ್ರಹಣ ಕ್ಷೇತ್ರ ಎಲ್ಲಾ ವಿಧದ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾಗಿದೆ. ಆದರೆ ಇಷ್ಟೊಂದು ಅಭಿವೃದ್ಧಿ ಒಮ್ಮೆಲೇ ಆಗಿಲ್ಲ ಬದಲಿಗೆ ಹಂತಹಂತವಾಗಿ ಅಭಿವೃದ್ಧಿಯಾಗಿರುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಯಾಗಲು ಹಲವರು ತಮ್ಮದೇ ಆದ ತಂತ್ರಜ್ಞಾನವನ್ನು ಬಳಸಿ ಹೊಸ ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ಅಂತಹವರ ಸಾಲಿಗೆ ಫ್ರಾನ್ಸ್ ದೇಶದ ಎಲ್.ಜೆ.ಎಂ.ಡಾಗೈರ್ ಸೇರುತ್ತಾರೆ ಎಂದರು.
ಎಲ್.ಜೆ.ಎಂ.ಡಾಗೈರ್ ಅವರನ್ನು ಛಾಯಾಗ್ರಹಣದ ಪಿತಾಮಹ ಎಂದು ಕೂಡ ಕರೆಯಲಾಗುತ್ತದೆ. ವಿಶ್ವ ಛಾಯಾಗ್ರಾಹಕರ ದಿನದಂದು ಪ್ರತಿಯೊಬ್ಬರು ಡಾಗೈರ್ ನ್ನು ನೆನಪಿಸಿಕೊಳ್ಳಲೇ ಬೇಕು ಎಂದು ಅವರು ಹೇಳಿದರು.
ಎಲ್.ಜೆ.ಎಂ.ಡಾಗೈರ್ ಛಾಯಾಗ್ರಹಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಫ್ರಾನ್ಸ್ ನ ಕುಗ್ರಾಮವಾದ ಕಾರ್ಮೆಲ್ಲೀಸ್ ಎಂಬಲ್ಲಿ 18ನೇ ನವೆಂಬರ್ 1787ರಲ್ಲಿ ಡಾಗೈರ್ ಜನಿಸಿದರು. ವಿದ್ಯಾಭ್ಯಾಸದ ಬಳಿಕ ಹೊಟ್ಟೆಪಾಡಿಗಾಗಿ ಬೇರ ಬೇರೆ ವೃತ್ತಿಗಳನ್ನು ಮಾಡಿದರಾದರೂ ಕೊನೆಗೆ 1829ರಲ್ಲಿ ಛಾಯಾಗ್ರಹಣದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಶ್ರಮವಹಿಸಿ ದುಡಿದ ಅವರು ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಆಸಕ್ತಿಯಿಂದ ತಿಳಿದುಕೊಂಡರು. ಅಷ್ಟೇ ಅಲ್ಲ ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಅಂದರೆ 1833ರ ವೇಳೆಗೆ ಇಡೀ ಕಂಪನಿಯ ಚುಕ್ಕಾಣಿಯನ್ನು ತಮ್ಮ ಕೈಗೆ ಪಡೆದುಕೊಂಡರು. ಆ ನಂತರ ಹೆಚ್ಚಿನ ಶ್ರಮವಹಿಸಿ ದುಡಿದ ಅವರು ಕೆಲವೇ ವರ್ಷಗಳಲ್ಲಿ ಎಲ್ಲೆಡೆ ಡಾಗೈರ್ ಕಂಪನಿ ಎಂದೇ ಕರೆಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತರು ಎಂದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಎಂ.ಎಲ್ ಗಿರಿಧರ್ ಹಿರಿಯ ಛಾಯಾಗ್ರಾಹಕರಾದ ರಾಮಕೃಷ್ಣಪ್ಪ, ದಿವುಶಂಕರ್, ವಾಹಿದ್, ಅಬ್ದುಲ್ ಕರೀಂ, ಚಂದು ಮಸ್ಕಲ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


