ಬೆಂಗಳೂರು: ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್ ಎಸ್ ಧೋನಿ ಅವರ ಮ್ಯಾನೇಜರ್ ಅವರಿಗೆ ವಂಚಿಸಲಾಗಿದ್ದು, ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ತಾನು ಎಂದು ಹೇಳಿಕೊಂಡು ಇಂಡಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರ ಮ್ಯಾನೇಜರ್ ಗೆ ವಂಚಿಸಿದ ಘಟನೆ ಕಳೆದ ಅಕ್ಟೋಬರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದೇವರ ಸ್ಪೆಷಲ್ ದರ್ಶನ ಮಾಡಿಸಿಕೊಡುತ್ತೇನೆ ಎಂದು ಹೇಳಿ ವಂಚಕನೊಬ್ಬ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಂಎಸ್ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಎಂಬವರಿಗೆ ಬರೋಬ್ಬರಿ ಆರುವರೆ ಲಕ್ಷ ರೂಪಾಯಿಗಳಷ್ಟು ವಂಚಿಸಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ತಾನು ತಾನು ಐಎಎಸ್ ಅಧಿಕಾರಿಯಾಗಿದ್ದು, ತಿರುಪತಿಯಲ್ಲಿ ಹನ್ನೆರಡು ಮಂದಿಗೆ ದೇವರ ವಿಶೇಷ ದರ್ಶನ ಮಾಡಿಸುತ್ತೇವೆ; ರೂಮ್ ವ್ಯವಸ್ಥೆ ಇರುತ್ತದೆ. ಪ್ರೋಟೋಕಾಲ್ ಮೂಲಕ ಯಾರನ್ನಾದ್ರೂ ಕಳಿಸುವ ಅಧಿಕಾರ ತನಗಿದೆ ಎಂದು ಒಬ್ಬಾತ ವಂಚಿಸಿದ್ದಾನೆ.
ಸ್ನೇಹಿತರ ಕುಟುಂಬವನ್ನು ಕಳಿಸುವ ನಿಟ್ಟಿನಲ್ಲಿ ಮೂರು ಲಕ್ಷ ರೂಪಾಯಿ ಹಣವನ್ನು ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಅವರು ಪೋನ್ ಪೇ ಮಾಡಿದ್ದರು. ಸಾಯಿ ಟ್ರಸ್ಟ್ ಹೆಸರಿಗೆ ಮೂರು ಲಕ್ಷ ಹಣ ಪಡೆದಿರುವ ಆರೋಪವಿದೆ. ಹಣ ಪಡೆದು ಹಿಂತಿರುಗಿಸದ ಹಿನ್ನೆಲೆಯಲ್ಲಿ ಸ್ವಾಮಿನಾಥನ್ ಅವರು ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.


