ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದ 80 ವರ್ಷದ ವಯೋವೃದ್ಧೆ ಹುಚ್ಚಮ್ಮ ಎಂಬವರು ಗೃಹಲಕ್ಷ್ಮೀ ಹಣದ ಜೊತೆಗೆ ವೃದ್ಧಾಪ್ಯ ವೇತನವೂ ಸಿಗದೇ ಕಷ್ಟಪಡುತ್ತಿರುವುದಾಗಿ ಇತ್ತೀಚೆಗೆ ನಮ್ಮತುಮಕೂರು ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು. “ಗೃಹ ಲಕ್ಷ್ಮಿಯ ಹಣವೂ ಇಲ್ಲ, ವೃದ್ದಾಪ್ಯ ವೇತನವೂ ಇಲ್ಲ: ವೃದ್ಧೆಯನ್ನು ಭಿಕ್ಷಾಟನೆ ದೂಡಿದ ಅಧಿಕಾರಿಗಳು” ಎಂಬ ಶೀರ್ಷಿಕೆಯಡಿ ನಮ್ಮತುಮಕೂರು ವರದಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗ ವೃದ್ಧೆಗೆ ನೆರವಾಗಿದೆ.
ರಘುರಾಜ್ ಎಂಬವರು ಈ ಕುರಿತ ವರದಿಗಳನ್ನು ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಅಧಿಕಾರಿಗಳು, ವೃದ್ಧೆ ಹುಚ್ಚಮ್ಮ ಅವರ ಕಷ್ಟಕ್ಕೆ ನೆರವಾಗಿದ್ದಾರೆ. ಆಗಸ್ಟ್ 5 ರಂದು ತಿಪಟೂರಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವೃದ್ಧೆಯ ಮನೆ ಭೇಟಿ ಮಾಡಿ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ತಿಳಿದು ಬಂದಿರುವುದೇನೆಂದರೆ, ಹುಚ್ಚಮ್ಮನವರು 2023ರ ಸೆಪ್ಟೆಂಬರ್ ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇನ್ ಆಕ್ಟಿವ್ ಬ್ಯಾಂಕ್ ಅಕೌಂಟ್ ನಿಂದಾಗಿ ಗೃಹಲಕ್ಷ್ಮಿ ಹಣವು ಅವರಿಗೆ ಸಿಕ್ಕಿರುವುದಿಲ್ಲ. ಸದ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವೃತ್ತ ಮೇಲ್ವಿಚಾರಕಿಯರು ಹುಚ್ಚಮ್ಮನವರ ಮನೆಗೆ ಭೇಟಿ ನೀಡಿ ಹಾಲ್ಕುರಿಕೆ ಅಂಚೆ ಕಚೇರಿಯಲ್ಲಿ ಹೊಸದಾಗಿ ಐ.ಪಿ.ಪಿ.ಬಿ. ಖಾತೆ ತೆರೆದಿರುತ್ತಾರೆ. ಬ್ಯಾಂಕ್ ಸಂಬಂಧಿತ ಸಮಸ್ಯೆ ಬಗೆಹರಿದಿದ್ದು, ಗೃಹಲಕ್ಷ್ಮಿ ಯೋಜನೆಯ ಹಣ ಹುಚ್ಚಮ್ಮನವರಿಗೆ ಮುಂದಿನ ದಿನಗಳಲ್ಲಿ ಪಾವತಿಯಾಗಲಿದೆ ಎಂದು ತುಮಕೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296