ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪರವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ ಉಂಡಿ ಮಂಜುಳ ಶಿವಪ್ಪರವರು ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸಿದರಲ್ಲದೇ, ಸಂಬಂಧಪಟ್ಟ ಅಧಿಕಾರಿಗಳನ್ನ ಕರೆಸಿ ಮಾತನಾಡಿ, ಸೂಕ್ತ ಕ್ರಮ ಜರುಗಿಸುವಂತೆ ತಾಲೂಕು ಹೆಲ್ತ್ ಆಫೀಸರ್ ಗೆ ಆದೇಶ ನೀಡಿದರು.
ಇದೇ ವೇಳೆ ನ್ಯಾಯಾಧೀಶರಿಗೆ ಉತ್ತರಿಸಿದ ಹೆಲ್ತ್ ಆಫೀಸರ್, ಇಬ್ಬರು ನುರಿತ ನರ್ಸ್ ಗಳನ್ನು ನೇಮಿಸುತ್ತೇನೆ ಮತ್ತು ಇಬ್ಬರು ವೈದ್ಯಾಧಿಕಾರಿಗಳಿದ್ದಾರೆ ಅವರಿಗೆ ಬೆಳಗ್ಗೆ ಒಬ್ಬರು ಮತ್ತು ರಾತ್ರಿ ಒಬ್ಬರು ಕಾರ್ಯನಿರ್ವಹಿಸುವಂತೆ ಹೇಳುತ್ತೇನೆ, ಸಾರ್ವಜನಿಕರಿಗೆ ಯಾವುದೇ ಪ್ರಥಮ ಚಿಕಿತ್ಸೆ ಕೊಡುವಂತಹ ಕೆಲಸವನ್ನು ಮಾಡುತ್ತೇವೆ ಎಂದು ಸ್ಥಳದಲ್ಲೇ ಉತ್ತರಿಸಿದರು.
ಸ್ಥಳದಲ್ಲಿ ಗುಬ್ಬಿ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ನಂದೀಶ ಬಿ.ವಿ., ವಕೀಲರಾದ ಡಿ.ಮಂಜುನಾಥ್, ಎಂ.ಪಿ.ರವೀಶ್ ಸಿ.ಕೆ.ಪುರ, ಪಿಎಸ್ ಐ ಶಿವಕುಮಾರ್, ಪಿಡಬ್ಲ್ಯುಡಿ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.
ಸಾರ್ವಜನಿಕರ ದೂರು:
* ಸಿ.ಎಸ್.ಪುರ ಹಾಸ್ಪಿಟಲ್ ನಲ್ಲಿ ಸರಿಯಾಗಿ ಯಾವುದೇ ಸೌಲಭ್ಯ ಸಿಗುತ್ತಿಲ್ಲ.* ಯಾವುದೇ ರೀತಿಯಾಗಿ ತೊಂದರೆಯಾದರೂ ಪ್ರಾಥಮಿಕವಾಗಿ ಚಿಕಿತ್ಸೆ ತಕ್ಷಣದಲ್ಲಿ ಸಿಗುತ್ತಿಲ್ಲ.
* ಬಿಪಿ ಹಾಗೂ ಸಕ್ಕರೆ ಖಾಯಿಲೆಗಳಿಗೆ ಮಾತ್ರೆಗಳನ್ನ ಒದಗಿಸುತ್ತಿಲ್ಲ, ಕೇಳಿದ್ರೆ, ಗುಬ್ಬಿಗೆ, ಕಲ್ಲೂರಿಗೆ ಹೋಗಿ ಅಂತ ವೈದ್ಯಾಧಿಕಾರಿಗಳು ಹೇಳುತ್ತಾರೆ. ಆದ್ರೆ ಸಿ.ಎಸ್.ಪುರದಿಂದ ಗುಬ್ಬಿಗೆ ಸುಮಾರು 25 ಕಿ.ಮೀ. ದೂರವಿದೆ. ಇದರಿಂದಾಗಿ ವೃದ್ಧರಿಗೆ ಹೋಗಲು ಸಾಧ್ಯವಿಲ್ಲ, ಹಾಗಾಗಿ ಸಿ.ಎಸ್.ಪುರದಲ್ಲೇ ಈ ವ್ಯವಸ್ಥೆ ಮಾಡಿಕೊಡಿ.
* ವೈದ್ಯಾಧಿಕಾರಿಗಳು ಮಧ್ಯಾಹ್ನ 3 ಗಂಟೆಯ ನಂತರ ಇರೋದಿಲ್ಲ, ಅಂತಹ ಸಂದರ್ಭಗಳಲ್ಲಿ ಯಾವುದೇ ಅಪಘಾತವಾದ್ರೆ, ತಕ್ಷಣದಲ್ಲಿ ಪ್ರಾಥಮಿಕ ಚಿಕಿತ್ಸೆ ಸಿಗುತ್ತಿಲ್ಲ.
* ಸಿ.ಎಸ್.ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ಹಾಗೂ ಒಬ್ಬ ಡ್ರೈವರಿಗೆ ಅನುಮತಿ ಇದ್ದರೂ, ಸೌಲಭ್ಯ ಒದಗಿಸಿಲ್ಲ.
ಈ ರೀತಿಯಾಗಿ ಸಾಕಷ್ಟು ಸಾರ್ವಜನಿಕರ ಪ್ರಶ್ನೆಗಳನ್ನು ನ್ಯಾಯಾಧೀಶರು ಆಲಿಸಿದ್ರು. ಬಳಿಕ ಈ ಸಮಸ್ಯೆಗಳನ್ನ ತಕ್ಷಣ ಪರಿಹರಿಸೋದಾಗಿ ತಿಳಿಸಿದ್ರು. ತಾಲೂಕು ಹೆಲ್ತ್ ಆಫೀಸರ್ ನ್ನು ಸ್ಥಳಕ್ಕೆ ಕರೆಸಿ ತರಾಟೆಗೆತ್ತಿಕೊಂಡರು.


