ಮಧುಗಿರಿ: ಮಳೆಗಾಲ ಆರಂಭಕ್ಕೂ ಮುನ್ನ ಸರ್ಕಾರಿ ಕಟ್ಟಡಗಳು ಮತ್ತು ಶಾಲಾ ಕಟ್ಟಡಗಳ ಮೇಲೆ ಬೆಳೆದಿರುವಂತಹ ಗಿಡಗಳನ್ನು ಒಂದು ವಾರದೊಳಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ರಸ್ತೆ ಬದಿಗಳಲ್ಲಿ ನೆಡಲಾಗಿರುವ ಗಿಡಗಳಿಗೆ ನಿಯಮಿತವಾಗಿ ನೀರು ಹಾಕಿ ಸಮರ್ಪಕವಾಗಿ ಸಂರಕ್ಷಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕೆ.ಎನ್.ರಾಜಣ್ಣ ಸೂಚಿಸಿದರು.
ಅವರು ತಾಲೂಕಿನ ಮಿಡಿಗೇಶಿ ಹೋಬಳಿಯಲ್ಲಿ ಸುಮಾರು 7.95 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮುಂದಿನ ವಾರ ಕೆಲವು ಗ್ರಾಮಗಳಿಗೆ ಸ್ವತಃ ಭೇಟಿ ನೀಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಲಾಗುವುದು. ಅಷ್ಟರೊಳಗೆ ಎಲ್ಲಾ ಸರ್ಕಾರಿ ಕಟ್ಟಡಗಳು ಹಾಗೂ ಶಾಲಾ ಕಟ್ಟಡಗಳ ಮೇಲ್ಛಾವಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿರಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಹೆಚ್ಚು ಬಡವರು ವಾಸವಿರುವ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹಳ್ಳಿಗಾಡಿನ ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಿ ಉನ್ನತ ಹುದ್ದೆಗಳನ್ನು ಗಳಿಸುವಂತಾಗಬೇಕು. ಗುತ್ತಿಗೆದಾರರು ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಕೆಲವು ಗಡಿ ಭಾಗದ ರಸ್ತೆಗಳು ಹದಗೆಟ್ಟಿರುವ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದು, ಅವುಗಳನ್ನು ದುರಸ್ತಿಗೊಳಿಸಲಾಗುತ್ತಿದೆ. ಇದು ಜನರ ಅನುಕೂಲಕ್ಕಾಗಿ ಕೈಗೊಳ್ಳಲಾದ ಕಾರ್ಯ. ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಗ್ರಾಮೀಣ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಸಂಕಲ್ಪದಿಂದ ಅನ್ನಭಾಗ್ಯ ಸೇರಿದಂತೆ ವಿವಿಧ ಗ್ಯಾರಂಟಿಗಳನ್ನು ನೀಡಲಾಗಿದೆ. ಈ ಯೋಜನೆಗಳ ಸದುಪಯೋಗ ಪಡೆದು ಕುಟುಂಬಗಳು ಆರ್ಥಿಕವಾಗಿ ಸದೃಢರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕು. ಯಾರೂ ಒಬ್ಬರ ಅಡಿಯಾಳಾಗಿ ಬದುಕದೇ ಸ್ವಾಭಿಮಾನದಿಂದ ಬದುಕುವಂತಾಗುವುದು ಸರ್ಕಾರದ ಆಶಯವಾಗಿದೆ. ಯೋಜನೆಗಳು ಅರ್ಹರಿಗೆ ತಲುಪಬೇಕು, ಅನರ್ಹರು ದುರುಪಯೋಗಪಡಿಸಿಕೊಳ್ಳಬಾರದು ಎಂದು ಹೇಳಿದರು.
ನಾವು ಸೇವಿಸುವ ಗಾಳಿಯು ಸಹ ಅಶುದ್ಧವಾಗಿದ್ದು ಆಮ್ಲಜನಕದ ಕೊರತೆಯನ್ನು ನೀಗಿಸಲು ಹೆಚ್ಚು ಮರಗಿಡಗಳನ್ನು ಬೆಳೆಸಲು ಮುಂದಾಗಬೇಕು. ರಸ್ತೆ ಬದಿಗಳಲ್ಲಿ ನೆಡಲಾಗಿರುವ ಗಿಡಗಳಿಗೆ ನಿಯಮಿತವಾಗಿ ನೀರು ಹಾಕಿ, ಪಾತಿ ವ್ಯವಸ್ಥೆ ಮಾಡಿ ಅವುಗಳನ್ನು ಉಳಿಸಬೇಕು. ಕೇವಲ ಗಿಡ ನೆಡುವುದಲ್ಲದೆ ಅವು ಬೆಳೆಯುವಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆ ಹಾಗೂ ಪಿಡಿಒಗಳ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಇಇ ಹನುಮಂತರಾವ್, ಇಒ ಲಕ್ಷ್ಮಣ್, ಬಿಇಒ ಹನುಮಂತರಾಯಪ್ಪ, ಎಡಿ ಧನಂಜಯ, ಇಇ ಹನುಮಂತರಾವ್, ಲೋಕೇಶ್ವರಪ್ಪ, ಸುರೇಶ್, ಡಿವೈಎಸ್ಪಿ ಮಂಜುನಾಥ್, ಪಿಎಸ್‌ಐ ಹನುಮಂತರಾಯಪ್ಪ, ಪಿಡಿಒಗಳಾದ ಕುಮಾರಸ್ವಾಮಿ, ರಂಗನಾಥ್, ರಜನಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ. ರಾಜಣ್ಣ, ಕೆಪಿಸಿಸಿ ಸದಸ್ಯ ಮಲ್ಲಿಕಾರ್ಜುನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಗುತ್ತಿಗೆದಾರರಾದ ಪ್ರಶಾಂತ್, ಕೆ.ಎಸ್.ಶಮೀರ್ ಅಹಮದ್, ಕೆ.ಎಸ್.ನಾಸಿರ್, ವೆಂಕಟಸುಬ್ಬಯ್ಯ, ನಾಗಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


